ರಹಸ್ಯ ಕಂಪಾರ್ಟ್ಮೆಂಟ್ನಲ್ಲಿ ಗೋವಾ ಮದ್ಯ ಸಾಗಾಟ; ಅನಮೋಡ ಚೆಕ್ಪೋಸ್ಟ್ನಲ್ಲಿ ಮದ್ಯ, ಲಾರಿ ಜಪ್ತಿ

ದಾಂಡೇಲಿ: ಗೋವಾ ರಾಜ್ಯದಿಂದ ತಮಿಳುನಾಡಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅನಮೋಡ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ 267 ಲೀಟರ್ ವಿವಿಧ ನಮೂನೆಯ ಗೋವಾ ಮದ್ಯ ಹಾಗೂ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ನವೆಂಬರ್ 6ರಂದು ಮಧ್ಯರಾತ್ರಿ 12.45ರ ಸುಮಾರಿಗೆ ಅನಮೋಡ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ತಮಿಳುನಾಡು ನೋಂದಣಿ ಸಂಖ್ಯೆಯ ಐಚರ್ ಪ್ರೋ ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಲಾರಿಯ ಹಿಂಭಾಗದಲ್ಲಿ ರಹಸ್ಯವಾಗಿ ನಾಲ್ಕು ಕೃತಕ ಕಂಪಾರ್ಟ್ಮೆಂಟ್ಗಳನ್ನು ನಿರ್ಮಿಸಿ, ಅವುಗಳಲ್ಲಿ ಗೋವಾದಲ್ಲಿ ತಯಾರಿಸಲಾದ ವಿವಿಧ ನಮೂನೆಯ 267 ಲೀಟರ್ ಮದ್ಯದ ಬಾಟಲಿಗಳನ್ನು ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದೇವಸತಿರಮ್ ಅಂಚೆಯ ಸತ್ಯನಗರ ನಿವಾಸಿ ಅರಳುಮಣಿ ಎಂಬಾತ ಮದ್ಯವನ್ನು ಗೋವಾದಿಂದ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದ ಎನ್ನಲಾಗಿದೆ.
ಅಬಕಾರಿ ಅಧಿಕಾರಿಗಳು ಮದ್ಯದೊಂದಿಗೆ ಲಾರಿಯನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಜಪ್ತಿಯಾದ ಮದ್ಯದ ಅಂದಾಜು ಮೌಲ್ಯ ₹1.20 ಲಕ್ಷವಾಗಿದ್ದು, ಲಾರಿಯ ಮೌಲ್ಯ ಸುಮಾರು ₹20 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕರಿಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಎಚ್.ಸಿ. (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗದ ನಿರ್ದೇಶನದಂತೆ, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಅವರ ಮಾರ್ಗದರ್ಶನದಲ್ಲಿ ಹಾಗೂ ಯಲ್ಲಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಶ್ರೀಶೈಲ್ ಅವಜಿ ಅವರ ಸೂಚನೆಯ ಮೇರೆಗೆ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಅನಮೋಡ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ್ ಹಾಗೂ ಸಿಬ್ಬಂದಿಗಳಾದ ಗಜಾನನ ನಾಯಕ್, ರಮೇಶ್ ರಾಥೋಡ್, ವಿಕ್ರಂ ಬಿಡಿಕರ್, ಪ್ರವೀಣ್ ಬರಗಾಲಿ, ಆನಂದ ರೆಡ್ಡಿ ಮತ್ತು ಶ್ರೀಕಾಂತ್ ಜಾದವ್ ಪಾಲ್ಗೊಂಡಿದ್ದರು.
