
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜುವೆಲರ್ಸ್ ಅಂಗಡಿಯಲ್ಲಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಅಂತರ ಜಿಲ್ಲಾ ಇಬ್ಬರು ಮಹಿಳಾ ಆರೋಪಿತರನ್ನು ಮುಂಡಗೋಡ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 17ರಂದು ಮಧ್ಯಾಹ್ನ 3.45ರಿಂದ 4.15ರ ನಡುವಿನ ಅವಧಿಯಲ್ಲಿ ಜುವೆಲರ್ಸ್ ಅಂಗಡಿಯಲ್ಲಿದ್ದವರ ಗಮನಕ್ಕೆ ಬಾರದಂತೆ ಸುಮಾರು ₹1.30 ಲಕ್ಷ ಮೌಲ್ಯದ, 700 ಗ್ರಾಂ ತೂಕದ ನಾಲ್ಕು ಜೊತೆ ಬೆಳ್ಳಿಯ ಕಾಲುಚೈನ್‌ಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು.
ಖಚಿತ ಮಾಹಿತಿಯ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಗ್ರಾಮದ ನಿವಾಸಿಗಳಾದ ಶಾಂತಾ (52) ಹಾಗೂ ಶಾಂತಾ (46) ಎಂಬ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿತರಿಂದ ಕಳವು ಮಾಡಿದ್ದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ನಿರೀಕ್ಷಕ ರಮೇಶ ಹಾನಾಪೂರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ಗೌಡರ, ಪ್ರೊ. ಪಿಎಸ್‌ಐ ನಿಂಗರಾಜ ಕರಡಿಗುದ್ದಿ, ಎಎಸ್‌ಐ ಸೋಮಶೇಖರ ಮೇತ್ರಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ಚಿಂಚಲಿ, ತಿರುಪತಿ ಚೌಡಣ್ಣನವರ, ಮಹೇಶ ಹತ್ತಳ್ಳಿ, ಶಿವಾನಂದ ದಾನಣ್ಣನವರ ಹಾಗೂ ರೇಖಾ ಹುಳ್ಳೆಣ್ಣನವರ ಭಾಗವಹಿಸಿದ್ದರು.
ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರು ಪ್ರಶಂಸಿಸಿದ್ದಾರೆ.
