ಗೋಕರ್ಣ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಮಹತ್ವ; ಎಚ್ಚರಿಕೆ ಫಲಕ ಅಳವಡಿಸಿದ ಪೊಲೀಸರು

ಗೋಕರ್ಣ: ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಗೋಕರ್ಣದ ಓಂ ಹಾಗೂ ಕುಡ್ಲೆ ಕಡಲತೀರಗಳಲ್ಲಿನ ಅಪಾಯಕಾರಿ ಕಲ್ಲುಬಂಡೆಗಳ ಬಳಿ ಪೊಲೀಸರು ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದಾರೆ.
ಪಿ.ಐ. ಶ್ರೀಧರ ಎಸ್.ಆರ್. ಅವರ ನೇತೃತ್ವದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದ್ದು, ಸಮುದ್ರದಂಚಿನ ಅಪಾಯಕಾರಿ ಕಲ್ಲುಬಂಡೆಗಳ ಮೇಲೆ ನಿಂತು ಫೋಟೋ ತೆಗೆಯುವುದು, ಅತಿಯಾಗಿ ಓಡಾಡುವುದು ಹಾಗೂ ಅಪಾಯಕಾರಿ ಸ್ಥಳಗಳಿಗೆ ತೆರಳುವುದನ್ನು ಪ್ರವಾಸಿಗರು ತಪ್ಪಿಸುವಂತೆ ಸೂಚಿಸಲಾಗಿದೆ.
ಈ ಪ್ರದೇಶದಲ್ಲಿ ಈ ಹಿಂದೆ ಹಲವು ಬಾರಿ ಪ್ರವಾಸಿಗರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಅವಘಡಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅಪಾಯಕಾರಿ ಕಲ್ಲುಬಂಡೆಗಳ ಮೇಲೆ ‘ಅಪಾಯಕಾರಿ ಸ್ಥಳ, ಇಲ್ಲಿ ಬರಬೇಡಿ’ ಎಂಬ ಎಚ್ಚರಿಕೆ ಸಂದೇಶವನ್ನು ಅಳವಡಿಸಲಾಗಿದೆ.
ಗೋಕರ್ಣದ ಕಡಲತೀರಗಳು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣಗಳಾಗಿದ್ದು, ಕಡಲಿನ ಅಲೆಗಳು ಹಾಗೂ ಕಲ್ಲುಬಂಡೆಗಳ ಪ್ರದೇಶದಲ್ಲಿ ಅನಿರೀಕ್ಷಿತ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ವಿಶೇಷವಾಗಿ ಫೋಟೋ ಅಥವಾ ಸೆಲ್ಫಿಗಾಗಿ ಅಪಾಯಕಾರಿ ಬಂಡೆಗಳ ಮೇಲೆ ಹತ್ತುವುದು, ಸಮುದ್ರದ ಅಂಚಿನಲ್ಲಿ ಅತಿಯಾಗಿ ಸಾಹಸ ಮಾಡುವುದು ಹಾಗೂ ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸುವುದನ್ನು ಪ್ರವಾಸಿಗರು ತಪ್ಪಿಸಬೇಕು. ಮಕ್ಕಳೊಂದಿಗೆ ಬರುವವರು ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಪಿಎಸ್‌ಐ ಅನಿಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
