ಮೊಬೈಲ್ ಖರೀದಿಸಿ ಹಣ ಪಾವತಿಸಿದಂತೆ ನಕಲಿ ಸಂದೇಶ ತೋರಿಸಿ ವಂಚನೆ; ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ ಕುಮಟಾ ಪೊಲೀಸರು

ಕುಮಟಾ: ಮೊಬೈಲ್ ಫೋನ್ ಖರೀದಿಸಿ ಹಣ ಪಾವತಿಸಿದಂತೆ ನಕಲಿ ಸಂದೇಶ ತೋರಿಸಿ, ಅಂಗಡಿ ಮಾಲೀಕರಿಗೆ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕುಮಟಾದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾತೋಶ್ರೀ ಏಜೆನ್ಸಿಸ್ ಮೊಬೈಲ್ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ರಿಯಲ್‌ಮಿ ಸಿ-100 ಎಕ್ಸ್ (4/64 ಜಿಬಿ) ಮೊಬೈಲ್ ಖರೀದಿಸಿದ್ದನು. ಮೊಬೈಲ್‌ನ ಬೆಲೆ ₹16,700 ಅನ್ನು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ, ಹಣ ಪಾವತಿಸದೇ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದನು.
ಈ ಕುರಿತು ಅಂಗಡಿ ಮಾಲೀಕ ಧನಂಜಯ ಮಂಜುನಾಥ ನಾಯ್ಕ (27), ಕೂಜಳ್ಳಿ ಅವರು ಅಕ್ಟೋಬರ್ 24ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಕುಮಟಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಗಮ್ಮನಹಳ್ಳಿ ಗ್ರಾಮದ ಕಿರಣಕುಮಾರ ಪಿ. (30) ಎಂಬಾತನನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಕೃತ್ಯಕ್ಕೆ ಬಳಸಿದ್ದ ಘೋರ್ಡ್ ಐಕಾನ್ ಕಾರನ್ನು (ಅಂದಾಜು ಮೌಲ್ಯ ₹1 ಲಕ್ಷ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ., ಪಿಎಸ್‌ಐಗಳಾದ ವಿಠಲ ಮಲವಡಕರ, ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಸುಬ್ರಹ್ಮಣ್ಯ ಹೆಗಡೆ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದು, ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.
