
ಕುಮಟಾ: ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ಖ್ಯಾತ ರಂಗಭೂಮಿ ಕಲಾವಿದ ಹಾಗೂ ನಾಟಕಕಾರ ಪಾಂಡುರಂಗ ಪಟಗಾರ (45) ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಕುಮಟಾ ತಾಲೂಕಿನ ಕಿಮಾನಿ ಗ್ರಾಮದ ಕರ್ಕಿಬೇಲ್ ಘಜನಿ ಸಮೀಪ ಶುಕ್ರವಾರ ನಡೆದಿದೆ.
ಬರ್ಗಿ ಗ್ರಾಮದ ಹುಣಸಿಕಂಬಿ ನಿವಾಸಿ ಮಂಜಯ್ಯ ಪಟಗಾರ ಅವರ ಪುತ್ರ ಪಾಂಡುರಂಗ ಅವರು ಶುಕ್ರವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ವಸಂತ ನಾಯ್ಕ ಎಂಬುವವರೊಂದಿಗೆ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಎಂದಿನಂತೆ ಕಪ್ಪೆಚಿಪ್ಪು (ಬೆಳಚು) ತೆಗೆಯಲು ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಅವರೊಂದಿಗೆ ತೆರಳಿದ್ದ ವಸಂತ ನಾಯ್ಕ ಅವರೂ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಾಂಡುರಂಗ ಪಟಗಾರ ಅವರು ಬಡತನದ ನಡುವೆಯೂ ನಾಟಕ ರಚನೆ ಹಾಗೂ ಅಭಿನಯದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. 'ರೌಡಿ ಅರ್ಜುನ', 'ಧರ್ಮದ ಊರಲಿ ಕರ್ಮದ ನಾಯಕ' ಸೇರಿದಂತೆ ನಾಲ್ಕು ನಾಟಕಗಳನ್ನು ರಚಿಸಿದ್ದರು. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಕಥಾನಾಯಕ ಹಾಗೂ ಕೌಟುಂಬಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅವರು ಕರ್ನಾಟಕ ರಾಜ್ಯ ನಾಟಕ ಬರಹಗಾರರ ಜಿಲ್ಲಾ ಸಂಘದ ಸದಸ್ಯರಾಗಿದ್ದರು. ಇತ್ತೀಚೆಗೆ ಧಾರವಾಡ ಜಿಲ್ಲೆಯ ಶಿರಕೋಳದ ಸಿದ್ಧಾರೂಢ ಸಿದ್ಧಾಶ್ರಮದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಕಲಾ ತಪಸ್ವಿ' ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ರಂಗಭೂಮಿಯಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದರೂ ಕುಟುಂಬ ನಿರ್ವಹಣೆಗಾಗಿ ಹಲವು ವರ್ಷಗಳಿಂದ ಕಪ್ಪೆಚಿಪ್ಪು ತೆಗೆಯುವ ಕಾಯಕವನ್ನೂ ಮಾಡುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ರಂಗಭೂಮಿ ಕಲಾವಲಯದಲ್ಲಿ ದುಃಖದ ಛಾಯೆ ಆವರಿಸಿದೆ.
ಪಾಂಡುರಂಗ ಪಟಗಾರ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ) ಸಂಘ, ಬೆಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು, ಮಹಾಲಿಂಗೇಶ್ವರ ನಾಟ್ಯಮಂಡಳಿ ಬರ್ಗಿ ಮತ್ತು ಗೋಳಿಬೀರ ನಾಟ್ಯಮಂಡಳಿ ಗೆಳೆಯರ ಬಳಗ ಬರ್ಗಿ ಸಂತಾಪ ಸೂಚಿಸಿವೆ.
