UK Express Logo

ಸಿದ್ದಾಪುರದಲ್ಲಿ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಬಂಧನ: 24 ಗಂಟೆಯೊಳಗೆ ಮೂವರ ಬಂಧನ

By UKExpress on 10/6/2026

ಸಿದ್ದಾಪುರ: ತಾಲೂಕಿನ ಹಾಳದಕಟ್ಟಾದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಭೇದಿಸಿದ್ದು, ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾಳದಕಟ್ಟಾ ಗ್ರಾಮದ ರಾಜು ತಂದೆ ಉಮೇಶ ಜಾಧವ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ರಾಜು ಜಾಧವ್ ಅವರು ಸಿದ್ದಾಪುರದ ಹಾಳದಕಟ್ಟಾದಲ್ಲಿರುವ ತಮ್ಮ ಮೂಲ ಮನೆಯಲ್ಲಿ ವಯಸ್ಸಾದ ತಾಯಿ ಹಾಗೂ ಮಾನಸಿಕ ಅಸ್ವಸ್ಥ ಸಹೋದರ ವಾಸವಾಗಿದ್ದರು. ಅ.3ರಂದು ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಅವರು ಸಂಜೆ 5 ಗಂಟೆ ಸುಮಾರಿಗೆ ಮನೆಯ ಬಾಗಿಲುಗಳಿಗೆ ಬೀಗ ಹಾಕಿ ತಾಯಿ ಹಾಗೂ ಸಹೋದರನನ್ನು ಕರೆದುಕೊಂಡು ತೊಗರ್ಸಿಗೆ ತೆರಳಿದ್ದರು.

ಅ.5ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯ ಸಮೀಪದವರು ಕರೆ ಮಾಡಿ ಮನೆಯ ಬಾಗಿಲು ತೆರೆದಿರುವುದಾಗಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಅಕ್ರಮವಾಗಿ ಒಳ ಪ್ರವೇಶಿಸಿದ್ದರು. ಬಳಿಕ ಮನೆಯ ಕೋಣೆಯಲ್ಲಿದ್ದ ಗೋದ್ರೇಜ್‌ನ ಲಾಕ್‌ ಕೂಡ ಮುರಿದು, ಒಳಗೆ ಇರಿಸಲಾಗಿದ್ದ ₹2,000 ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವುದು ಕಂಡುಬಂದಿತ್ತು.

ಈ ಕುರಿತು ರಾಜು ಜಾಧವ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಪಿಐ ಜೆ.ಬಿ. ಸೀತಾರಾಮ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ನಾಗಪ್ಪ, ಪಿಎಸ್‌ಐ (ತನಿಖೆ) ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ವಿಶೇಷ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ.

ಬಂಧಿತರನ್ನು ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಗೊವಿಂದಪ್ಪ (29), ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಚಿಂಚಲಿಯ ಕೃಷ್ಣ (20) ಹಾಗೂ ಹುಬ್ಬಳ್ಳಿಯ ತಾರೆಹಾಳ ರಸ್ತೆಯ ಗಣೇಶ್ (22) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ₹330 ನಗದು ಹಾಗೂ ಸುಮಾರು ₹2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ಕನೇ ಆರೋಪಿ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಚಿಂಚಲಿಯ ಗಂಗಪ್ಪ ಹಾಗೂ ಐದನೇ ಆರೋಪಿ ಚಿಂಚಲಿಯ ವಡ್ಡರಗಲ್ಲಿಯ ಮಂಜು ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಮುಂದುವರಿದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳು ರೂಢಿಗತ ಅಪರಾಧಿಗಳಾಗಿದ್ದು, ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಸರಣಿ ಕಳ್ಳತನ ನಡೆಸಲು ಬಂದಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ ಅನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ರಮೇಶ ಸಿ. ಕೂಡಲ, ಮಂಜಪ್ಪ ಟಿ., ಚೇತನ ಹಲಗೇರಿ, ರಾಜು ಎಂ., ವಿನಾಯಕ ಮಡಿವಾಳ, ನಾಗರಾಜ ತಿಮ್ಮಾಪುರ, ಮಣಿಕಂಠ ಬಿ.ಎನ್., ಅನೀಲ ನಾಯ್ಕ, ಸಂತೋಷ ತಳವಾರ, ರವಿ ಕ್ಯಾಲಕೊಂಡ, ಹೆಚ್.ಜಿ. ತಿಮ್ಮಪ್ಪ ಗೌಡ ಹಾಗೂ ಪ್ರಶಾಂತ ಅವರು ಭಾಗವಹಿಸಿದ್ದರು.

ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ ಅನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.