
ಕುಮಟಾ: ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಬುಧವಾರ ಬೆಳಗ್ಗೆ ಬೆಂಗಳೂರಿನ ಮೂಲದ 68 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ.
ರಾಮತೀರ್ಥ ಸಮುದ್ರದಲ್ಲಿ ಶವ ತೇಲುತ್ತಿರುವುದನ್ನು ಮೀನುಗಾರರು ಗಮನಿಸಿ ಬೀಚ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಬೀಚ್ ಸೂಪರ್‌ವೈಸರ್ ರವಿ ನಾಯ್ಕ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವು ಗೋಕರ್ಣ ಮುಖ್ಯ ಕಡಲತೀರದತ್ತ ತೇಲಿ ಬಂದು ದಡ ಸೇರಿರುವುದು ತಿಳಿದುಬಂದಿದೆ.
ಮೃತರನ್ನು ಬೆಂಗಳೂರು ಉತ್ತರದ ದಾಸರಹಳ್ಳಿ ನಿವಾಸಿ ಜೆ.ಎಸ್. ವೆಂಕಟೇಶ್ (68) ಎಂದು ಗುರುತಿಸಲಾಗಿದೆ.
ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ಸಮುದ್ರದಿಂದ ಶವವನ್ನು ಹೊರತೆಗೆದು ಆಂಬುಲೆನ್ಸ್‌ಗೆ ಸಾಗಿಸಲು ಸಹಕರಿಸಿದರು. ಘಟನಾ ಸ್ಥಳದಲ್ಲಿ ಗೋಕರ್ಣ ಪೊಲೀಸರು, ಬೀಚ್ ಸೂಪರ್‌ವೈಸರ್ ರವಿ ನಾಯ್ಕ್, ಜೀವರಕ್ಷಕರಾದ ರೋಷನ್ ಖಾರ್ವಿ, ಮೋಹನ ಅಂಬಿಗ, ಶಿವಪ್ರಸಾದ್ ಅಂಬಿಗ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳದಲ್ಲಿದ್ದರು.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
