UK Express Logo
BREAKING

ಮಾದನಗೇರಿ ಬಳಿ ನಿಂತಿದ್ದ ಆಟೋಗೆ ಲಾರಿ ಡಿಕ್ಕಿ; ರಿಕ್ಷಾ ಸಂಪೂರ್ಣ ನಜ್ಜುಗುಜ್ಜು

By UKExpress on 11/10/2026

ಅಂಕೋಲಾ: ಮಾದನಗೇರಿ ಸಮೀಪದ ಬಳಲೆ ಹಿಲ್ಲೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಕ್ಕೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಂಕೋಲಾದಿಂದ ಕುಮಟಾ ಕಡೆಗೆ ಸಕ್ಕರೆ ತುಂಬಿಕೊಂಡು ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರಿಕ್ಷಾ ಸ್ಟ್ಯಾಂಡ್‌ಗೆ ನುಗ್ಗಿ ಆಟೋಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ಜಖಂಗೊಂಡಿದ್ದು, ಬಿಡಿಭಾಗಗಳು ರಸ್ತೆಯಲ್ಲಿ ಚದುರಿಹೋಗಿವೆ.

ಅದೃಷ್ಟವಶಾತ್ ಅಪಘಾತದ ವೇಳೆ ಆಟೋದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಲಾರಿ ಕ್ಲೀನರ್ ಗಾಯಗೊಂಡಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.