
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಜಿ.ಟಿ. ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕಾತಿಯನ್ನು ಘೋಷಿಸಿದ್ದಾರೆ. ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ಸಿದ್ದಾಪುರ ಮೂಲದ ಜಿ.ಟಿ. ನಾಯ್ಕ ಅವರು ಹಲವು ವರ್ಷಗಳಿಂದ ಕಾರವಾರದಲ್ಲಿ ನ್ಯಾಯವಾದಿಯಾಗಿ ವೃತ್ತಿ ನಡೆಸುತ್ತಿದ್ದಾರೆ. ದೀರ್ಘಕಾಲದಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅವರು, ಪಕ್ಷದ ಸಂಘಟನೆ ಹಾಗೂ ಸಿದ್ಧಾಂತಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡು ಬಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಜಿ.ಟಿ. ನಾಯ್ಕ ಅವರ ಹೆಸರು ಕೊನೆಯ ಹಂತದವರೆಗೂ ಮುಂಚೂಣಿಯಲ್ಲಿತ್ತು. ಆದರೆ ಅಂತಿಮವಾಗಿ ಅಂಜಲಿ ನಿಂಬಾಳ್ಕರ್ ಅವರಿಗೆ ಪಕ್ಷದ ಟಿಕೆಟ್ ದೊರೆತಿತ್ತು. ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ ಅವರ ಹೆಗಲೇರಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡುವ ಉದ್ದೇಶದ ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ಜಿಲ್ಲಾ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಪ್ರತಿ ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸ್ಥಳೀಯ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ವಿವಿಧ ಹಂತದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು.
ವೀಕ್ಷಕರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಚರ್ಚೆ ನಡೆಸಿದ ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಎಐಸಿಸಿ ಪ್ರಕಟಣೆ ತಿಳಿಸಿದೆ.
ಸುಮಾರು ಮೂರು ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಾಯಿ ಗಾಂವಕರ ಅವರ ಸ್ಥಾನಕ್ಕೆ ಇದೀಗ ಜಿ.ಟಿ. ನಾಯ್ಕ ನೇಮಕಗೊಂಡಿದ್ದಾರೆ.
ಜಿ.ಟಿ. ನಾಯ್ಕ ಅವರ ನೇಮಕಾತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದ್ದು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ. ಹೊಸ ಜವಾಬ್ದಾರಿಯ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಮತ್ತಷ್ಟು ಚೈತನ್ಯ ತುಂಬಲಿದ್ದಾರೆ ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.
ಜಿ.ಟಿ. ನಾಯ್ಕ ಅವರ ನೇಮಕಾತಿ ಅವರ ಅಭಿಮಾನಿಗಳಲ್ಲೂ ಹರ್ಷ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
