UK Express Logo

ಸಾವಿನ ಬಳಿಕವೂ ಬರಲಿಲ್ಲ ಮನೆಯವರು: ಭಟ್ಕಳದಲ್ಲಿ ಮಾನವೀಯತೆಯ ಅಂತ್ಯಸಂಸ್ಕಾರ

By UKExpress on 9/9/2026

ಭಟ್ಕಳ: ಆಂಧ್ರಪ್ರದೇಶ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರು ಭಟ್ಕಳದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದರೂ ಅವರು ಆಗಮಿಸದ ಹಿನ್ನೆಲೆಯಲ್ಲಿ ಸಮಾಜ ಸೇವಕರು ಹಾಗೂ ಸ್ಥಳೀಯರು ಮುಂದೆ ಬಂದು ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ವೆಲಗೂಡು ನಿವಾಸಿ ದೊದೆಕೊಲಾ ಬುಕಾರಿ (56) ಮೃತಪಟ್ಟವರು. ಎರಡೂ ಕಾಲುಗಳ ಶಕ್ತಿ ಕಳೆದುಕೊಂಡಿದ್ದ ಬುಕಾರಿ ವೀಲ್‌ಚೇರ್‌ನಲ್ಲಿ ಕುಳಿತು ಭಟ್ಕಳ ನಗರ ಹಾಗೂ ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಭಿಕ್ಷಾಟನೆಯಿಂದ ದೊರೆಯುತ್ತಿದ್ದ ಹಣದ ಜೊತೆಗೆ ಆಂಧ್ರಪ್ರದೇಶ ಸರ್ಕಾರದಿಂದ ಪಡೆಯುತ್ತಿದ್ದ ಅಂಗವಿಕಲ ಮಾಸಾಶನವನ್ನೂ ತಮ್ಮ ಕುಟುಂಬದ ಸದಸ್ಯರಿಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಬುಕಾರಿ ಅನಾರೋಗ್ಯದಿಂದ ಬಳಲುತ್ತಿದ್ದರು. ಭಟ್ಕಳ ರೈಲು ನಿಲ್ದಾಣದ ಸಮೀಪದ ಅಂಗಡಿಯೊಂದರ ಕಟ್ಟೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ಅವರನ್ನು ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಗಮನಿಸಿದ್ದರು. ಕೂಡಲೇ ಅವರನ್ನು ಅ.28ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.30ರಂದು ಬುಕಾರಿ ಮೃತಪಟ್ಟರು.

ಮೃತದೇಹವನ್ನು ಭಟ್ಕಳ ಶವಾಗಾರದಲ್ಲಿ ಇರಿಸಿದ ಬಳಿಕ ನಗರ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿರುವ ಅವರ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಪತ್ನಿ, ಮಗ ಸೇರಿದಂತೆ ಕುಟುಂಬದ ಸದಸ್ಯರಿಗೆ ಮೃತದೇಹವನ್ನು ಸ್ವೀಕರಿಸುವಂತೆ ತಿಳಿಸಲಾಯಿತು. ಆದರೆ ಕುಟುಂಬಸ್ಥರು ಇಂದು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಹೇಳುತ್ತಾ ದಿನಗಳನ್ನು ಕಳೆದರೂ ಕೊನೆಗೆ ಭಟ್ಕಳಕ್ಕೆ ಆಗಮಿಸಲಿಲ್ಲ.

ಸುಮಾರು ಎಂಟು ದಿನಗಳ ಕಾಲ ಮೃತದೇಹ ಶವಾಗಾರದಲ್ಲೇ ಉಳಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಬಳಿಕ ಪಿಎಸ್‌ಐ ಸೋಮನಾಥ ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಯಿತು.

ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರ ನೇತೃತ್ವದಲ್ಲಿ ಸ್ಥಳೀಯರಾದ ಲಕ್ಷ್ಮೀಶ ನಾಯ್ಕ, ಮೋಹನ ದೇವಾಡಿಗ, ಅಂಬುಲೆನ್ಸ್ ಚಾಲಕ ಮಾರುತಿ ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರ ಸಹಕಾರದೊಂದಿಗೆ ಬುಕಾರಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಜೀವನದ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಕುಟುಂಬಸ್ಥರು ನೆರವಾಗದಿರುವುದು ಹಾಗೂ ಸಾವಿನ ಬಳಿಕವೂ ಮೃತದೇಹ ಪಡೆಯಲು ಬಾರದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಆದರೆ ಕುಟುಂಬಸ್ಥರು ದೂರ ಉಳಿದ ಸಂದರ್ಭದಲ್ಲೂ ಸಮಾಜ ಸೇವಕರು ಮುಂದೆ ಬಂದು ಅಂತಿಮ ವಿಧಿವಿಧಾನ ನೆರವೇರಿಸಿರುವುದು ಭಟ್ಕಳದ ಮಾನವೀಯ ಮುಖವನ್ನು ತೋರಿಸಿದೆ.

ಬದುಕಿನಲ್ಲಿ ಆಸರೆಯಾಗಬೇಕಾದವರು ದೂರವಾದರೂ, ಸಾವಿನಲ್ಲಾದರೂ ಗೌರವಯುತ ಅಂತಿಮ ವಿದಾಯ ಸಿಗಬೇಕು ಎಂಬ ಮಾನವೀಯ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.