UK Express Logo

ಪ್ರಜಾಸೇವೆ ಆಂದೋಲನದ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ: ಜಿಲ್ಲಾಧಿಕಾರಿ

By UKExpress on 9/9/2026

ಕಾರವಾರ: ಜಿಲ್ಲೆಯಾದ್ಯಂತ ಸೆಪ್ಟೆಂಬರ್ 5ರಂದು ನಡೆದ ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಸ್ವೀಕೃತಗೊಂಡಿರುವ ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ಆದ್ಯತೆ ಮೇರೆಗೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ, ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 5ರಂದು ನಡೆದ ಪ್ರಜಾಸೇವೆ ಆಂದೋಲನ ಸಭೆಯ ಬಳಿಕದ ದಿನವೂ ಸಾರ್ವಜನಿಕರು ಐ.ಪಿ.ಜಿ.ಆರ್.ಎಸ್. ಪೋರ್ಟಲ್‌ನಲ್ಲಿ ಅಹವಾಲುಗಳನ್ನು ಸಲ್ಲಿಸಿದ್ದು, ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 1,642 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ ಇದುವರೆಗೆ 489 ಅರ್ಜಿಗಳು ವಿಲೇವಾರಿಯಾಗಿದ್ದು, ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳು ಒಂದು ವಾರದೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿವರವಾದ ಮಾಹಿತಿಯನ್ನು ನೀಡಬೇಕು. ಹೊಸ ಕಾಮಗಾರಿ ಅಥವಾ ಯೋಜನೆಗಳಿಗೆ ಸಂಬಂಧಿಸಿದಂತೆ ಮನವಿಗಳು ಸಲ್ಲಿಕೆಯಾಗಿದ್ದರೆ, ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಕಚೇರಿ ಅಥವಾ ಸರ್ಕಾರಕ್ಕೆ ಸಲ್ಲಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅನುದಾನ ಲಭ್ಯವಿದ್ದಲ್ಲಿ ಕಾಮಗಾರಿಯ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ, ಶೇ.100ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳು ಐ.ಪಿ.ಜಿ.ಆರ್.ಎಸ್. ಪೋರ್ಟಲ್ ಮೂಲಕ ಸಂಬಂಧಪಟ್ಟ ಇಲಾಖೆಗಳ ಲಾಗಿನ್‌ಗೆ ಈಗಾಗಲೇ ವರ್ಗಾವಣೆಯಾಗಿವೆ. ಆದ್ದರಿಂದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಲಾಗಿನ್‌ಗಳನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಮಾಲೋಚಕರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.

ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಗರಿಷ್ಠ ಪ್ರಯತ್ನ ನಡೆಸಬೇಕು. ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.