UK Express Logo

ಉತ್ತರ ಕನ್ನಡದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು: 600 ಅಜೋಲಾ ಘಟಕಗಳ ಸ್ಥಾಪನೆ

By UKExpress on 9/9/2026

ಕಾರವಾರ: ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಹವಾಮಾನ ವ್ಯತ್ಯಾಸದ ಸಂದರ್ಭಗಳಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಆಹಾರ ಒದಗಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 600 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಮುಂದಾಗಿದೆ.

ಅಜೋಲಾದಲ್ಲಿ ಪ್ರೋಟೀನ್, ಖನಿಜಾಂಶ ಸೇರಿದಂತೆ ಉತ್ತಮ ಪೌಷ್ಟಿಕಾಂಶಗಳಿರುವುದರಿಂದ ಜಾನುವಾರುಗಳಿಗೆ ಪೂರಕ ಆಹಾರವಾಗಿ ಬಳಸಬಹುದಾಗಿದೆ. ಈ ಯೋಜನೆಯಡಿ ಜಿಲ್ಲೆಯ 12 ತಾಲ್ಲೂಕುಗಳಲ್ಲಿ ಒಟ್ಟು 600 ಘಟಕಗಳನ್ನು ಸ್ಥಾಪಿಸಲು ₹18.90 ಲಕ್ಷ ವೆಚ್ಚ ನಿಗದಿಪಡಿಸಲಾಗಿದೆ.

ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಅಳತೆಯಲ್ಲಿ ಘಟಕ ನಿರ್ಮಿಸಲಾಗುತ್ತದೆ. ಪ್ರತಿ ಘಟಕಕ್ಕೆ ಸಾಮಗ್ರಿ ಹಾಗೂ ಕೂಲಿ ಸೇರಿದಂತೆ ಒಟ್ಟು ₹3,150 ವೆಚ್ಚವಾಗಲಿದೆ.

ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ ₹1,350, ಶೇ.80ರಷ್ಟು ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ ₹650, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ ₹250 ಹಾಗೂ 2 ಕೆಜಿ ಅಜೋಲಾ ತಳಿ/ಬೀಜಕ್ಕೆ ₹200 ಸೇರಿದಂತೆ ಸಾಮಗ್ರಿಗಳಿಗೆ ₹2,450 ವೆಚ್ಚವಾಗಲಿದೆ. ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ ₹700 ನಿಗದಿಪಡಿಸಲಾಗಿದೆ.

ಜಿಲ್ಲೆಗೆ ನಿಗದಿಪಡಿಸಿರುವ ಗುರಿಯನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಲಾಗುತ್ತದೆ. ಸೂಕ್ತ ಸ್ಥಳ ಹಾಗೂ ಸ್ವಚ್ಛ ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುವುದು. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸುವುದರಿಂದ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಚ್ಛ ನೀರು ಲಭ್ಯವಿರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.

ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ.

ರಾಜ್ಯದ ಎಲ್ಲಾ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಒಟ್ಟು 12,000 ಅಜೋಲಾ ಉತ್ಪಾದನಾ ಘಟಕಗಳನ್ನು ₹37.80 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ವಿಶೇಷವಾಗಿ ಹಾಲು ನೀಡುವ ದನ-ಕರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ವಿಬಿ-ಜಿ ರಾಮ್ ಜಿ ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೆ ಒಳಪಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಂದು ಘಟಕದ ಫಲಾನುಭವಿಯ ವಿವರಗಳು, ಆಧಾರ್ ಮಾಹಿತಿ, ಜಿಪಿಎಸ್ ಸ್ಥಳ ಹಾಗೂ ಘಟಕ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.