UK Express Logo

ಹುಲಿ ಉಗುರು, ಚಿರತೆ ಹಲ್ಲು, ಪ್ಯಾಂಗೋಲಿನ್ ಚಿಪ್ಪು… ಅರಣ್ಯ ದಳಕ್ಕೆ ಸಿಕ್ಕಿಬಿದ್ದ ಇಬ್ಬರು!

By UKExpress on 9/9/2026

ಯಲ್ಲಾಪುರ: ವನ್ಯಜೀವಿ ಉತ್ಪನ್ನಗಳ ಅಕ್ರಮ ಬೇಟೆ, ಸಂಗ್ರಹ ಹಾಗೂ ಸಾಗಾಟದ ವಿರುದ್ಧ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ವನ್ಯಜೀವಿ ಉತ್ಪನ್ನಗಳು ಪತ್ತೆಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಯಲ್ಲಾಪುರ ತಾಲ್ಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಶಿರಸಿ ಅರಣ್ಯ ಸಂಚಾರಿ ದಳಕ್ಕೆ ಲಭಿಸಿದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಹೊಂದಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ (ಗೌರ್) ಕೊಂಬುಗಳು, ಎಂಟು ಹುಲಿ ಉಗುರುಗಳು, 12 ಚಿರತೆ ಉಗುರುಗಳು, ಎರಡು ಹುಲಿ ಹಲ್ಲುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳು ಪತ್ತೆಯಾಗಿವೆ. ವನ್ಯಜೀವಿ ಉತ್ಪನ್ನಗಳ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎನ್ನಲಾದ ಒಂದು ಬೈಕ್ ಹಾಗೂ ಒಂದು ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಎಲ್ಲಾ ವನ್ಯಜೀವಿ ಉತ್ಪನ್ನಗಳನ್ನು ಕಾನೂನು ಪ್ರಕಾರ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳು ಎಲ್ಲಿಂದ ಬಂದವು, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಮತ್ತಷ್ಟು ವ್ಯಕ್ತಿಗಳು ಅಥವಾ ದೊಡ್ಡ ಮಟ್ಟದ ವನ್ಯಜೀವಿ ಕಳ್ಳಸಾಗಣೆ ಜಾಲವಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಅವರ ಪತ್ತೆ ಹಾಗೂ ಬಂಧನಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಈ ಕಾರ್ಯಾಚರಣೆಯನ್ನು APCCF ಹಾಗೂ IFS ಅಧಿಕಾರಿ ಮನೋಜ್ ತ್ರಿಪಾಠಿ, ಅಪರಾಧ ನಿಯಂತ್ರಣ ಘಟಕ (ವಿಜಿಲೆನ್ಸ್) ಮತ್ತು DCF ಹಾಗೂ IFS ಅಧಿಕಾರಿ ಸಂದೀಪ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ACF ರಾಘವೇಂದ್ರ ನಾಯಕ್, RFO ಶಿಲ್ಪಾ ನಾಯಕ್ ಹಾಗೂ ಶಿರಸಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವನ್ಯಜೀವಿಗಳ ಬೇಟೆ, ಅವುಗಳ ಅಂಗಾಂಗಗಳ ಸಂಗ್ರಹ, ಸಾಗಾಟ ಹಾಗೂ ಅಕ್ರಮ ವ್ಯಾಪಾರದಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಉಪ್ಪಳೇಶ್ವರದಲ್ಲಿ ನಡೆದಿರುವ ಈ ಕಾರ್ಯಾಚರಣೆ ವನ್ಯಜೀವಿ ಕಳ್ಳಸಾಗಣೆ ವಿರುದ್ಧ ಅರಣ್ಯ ಇಲಾಖೆ ಕೈಗೊಂಡಿರುವ ಮಹತ್ವದ ಕ್ರಮವಾಗಿದ್ದು, ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.