UK Express Logo

ಉತ್ತರ ಕನ್ನಡದಲ್ಲಿ ಅಪ್ರಾಪ್ತರ ವಾಹನ ಚಾಲನೆ: 131 ಪ್ರಕರಣ, 13 ಲಕ್ಷಕ್ಕೂ ಅಧಿಕ ದಂಡ

By UKExpress on 10/2/2026

ಕಾರವಾರ: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪೋಷಕರು ಹಾಗೂ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಜನವರಿ 2026ರಿಂದ ಸೆಪ್ಟೆಂಬರ್ 2026ರವರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ ಹಾಗೂ ಅವರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ 1988ರ ಕಲಂ 199(ಎ) ಅಡಿಯಲ್ಲಿ ಒಟ್ಟು 131 ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತ ವಯಸ್ಕರ ಪೋಷಕರು ಹಾಗೂ ವಾಹನ ಮಾಲೀಕರಿಗೆ ಒಟ್ಟು ರೂ.13,09,000 ದಂಡ ವಿಧಿಸಿದೆ.

ದಾಖಲಾದ ಪ್ರಕರಣಗಳ ಪೈಕಿ ಭಟ್ಕಳ ಶಹರ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು 45 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ಒಟ್ಟು ರೂ.5,38,500 ದಂಡ ವಿಧಿಸಿದೆ.

ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದರಿಂದ ಅವರ ಜೀವಕ್ಕೆ ಮಾತ್ರವಲ್ಲದೆ, ಇತರ ರಸ್ತೆ ಬಳಕೆದಾರರ ಸುರಕ್ಷತೆಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇಂತಹ ಉಲ್ಲಂಘನೆಗಳಿಗೆ ವಾಹನದ ಮಾಲೀಕರು ಹಾಗೂ ಪೋಷಕರು ಕಾನೂನು ಕ್ರಮ ಮತ್ತು ದಂಡಕ್ಕೆ ಒಳಪಡಬೇಕಾಗುತ್ತದೆ.

ಹೀಗಾಗಿ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ, ಕಾರು ಸೇರಿದಂತೆ ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡಲು ನೀಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ವಾಹನ ಮಾಲೀಕರು ಸಹ ಅಪ್ರಾಪ್ತರಿಗೆ ವಾಹನ ನೀಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

“ಅಪ್ರಾಪ್ತರಿಗೆ ವಾಹನ ನೀಡಬೇಡಿ — ಅವರ ಸುರಕ್ಷಿತ ಭವಿಷ್ಯವನ್ನು ಕಾಪಾಡಿ” ಎಂಬ ಸಂದೇಶದೊಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದೆ.

ಜಿಲ್ಲೆಯಾದ್ಯಂತ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ವಿರುದ್ಧ ತಪಾಸಣೆ ಹಾಗೂ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಪೋಷಕರು ಹಾಗೂ ವಾಹನ ಮಾಲೀಕರು ಕಾನೂನು ಪಾಲಿಸುವ ಮೂಲಕ ರಸ್ತೆ ಸುರಕ್ಷತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.