
ಸಿದ್ದಾಪುರ: ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡುವ ವಿಚಾರವಾಗಿ ಉಂಟಾದ ಜಗಳದ ಬಳಿಕ ಕರ್ತವ್ಯ ನಿರತ ಚಾಲಕ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಿದ್ದಾಪುರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಕಾನಗೋಡ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ಚಾಲಕ ಭಾಸ್ಕರ ಮಂಜುನಾಥ ಪಟಗಾರ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶಿರಸಿಯ ಮರಾಠಿಕೊಪ್ಪದ ಸಂದೀಪ ಲಕ್ಷ್ಮಣ ವಾಲ್ಮೀಕಿ, ಸೈಫ್ ಅಲಿ ಸೈಯದ್ ಹಾಗೂ ಶಿರಸಿ ತಾಲೂಕಿನ ಮರಿಗುಡ್ಡೆಯ ಹರ್ಷವರ್ಧನ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 1ರಂದು ಓಮಿನಿ ವಾಹನದಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡದ ವಿಚಾರವಾಗಿ ಚಾಲಕ ಭಾಸ್ಕರ ಅವರೊಂದಿಗೆ ಜಗಳ ನಡೆದಿತ್ತು ಎನ್ನಲಾಗಿದೆ. ಬಳಿಕ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಮತ್ತೆ ಬಂದು ಕೆಎಸ್‌ಆರ್‌ಟಿಸಿ ಕಂಡಕ್ಟರ್ ಗಣೇಶ ಉಪೇಂದ್ರ ನಾಯ್ಕ ಅವರನ್ನು ಬಸ್ಸಿನಿಂದ ಕೆಳಗೆ ಎಳೆದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಗಳ ಬಿಡಿಸಲು ಮುಂದಾದ ಚಾಲಕ ಭಾಸ್ಕರ ಅವರ ತಲೆಗೆ ಸಂದೀಪ ಕಬ್ಬಿಣದ ಜಾಕ್‌ನಿಂದ ಹೊಡೆಯಲು ಯತ್ನಿಸಿದ್ದು, ಅವರು ತಪ್ಪಿಸಿಕೊಂಡ ಪರಿಣಾಮ ಜಾಕ್‌ನ ಏಟು ಬಲಗೈ ಬೆರಳಿಗೆ ತಾಗಿ ಗಾಯವಾಗಿದೆ. ಇದೇ ವೇಳೆ ಕಂಡಕ್ಟರ್ ಗಣೇಶ ಅವರ ಬಲಭುಜಕ್ಕೂ ಕಬ್ಬಿಣದ ಜಾಕ್‌ನಿಂದ ಹೊಡೆದು ಗಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಫ್ ಅಲಿ ಸೈಯದ್ ಚಾಲಕನ ಮುಖಕ್ಕೆ ಗುದ್ದಿದ್ದಾನೆ ಹಾಗೂ ಆರೋಪಿಗಳು ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ಪಿಐ ಜೆ.ಬಿ. ಸೀತಾರಾಮ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು.
ತಂಡದಲ್ಲಿ ನಾಗಪ್ಪ ಪಿ.ಎಸ್.ಐ. (ತನಿಖೆ), ಶಾಂತಿನಾಥ ಕೆ. ಪಾಸಾನೆ ಪಿ.ಎಸ್.ಐ. (ಕಾ&ಸು), ರಮೇಶ ಎಸ್. ಗೌಡ, ಸುಭಾಶ ಬಿ. ನಾಯ್ಕ, ರಮೇಶ ಸಿ. ಕೂಡಲ, ಮಂಜಪ್ಪ ಟಿ., ರಾಘವೇಂದ್ರ, ಚೇತನ ಹಲಗೇರಿ, ರಾಜು ಎಂ., ಗಿರೀಶಯ್ಯ, ಸಂದೀಪ ನಾಯ್ಕ, ಅಭಿಜಿತ್ ಹಾಗೂ ಸಂತೋಷ ಮಲ್ಲೂರು ಇದ್ದರು.
ಪೊಲೀಸ್ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗಳ ಒಳಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತನಿಖೆಗೆ ಸಂತೋಷ ತಳವಾರ, ಚಂದ್ರಶೇಖರ ನಾಯ್ಕ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೊಂಡ ಹಾಗೂ ವಿನಾಯಕ್ ಮಡಿವಾಳ ಅವರು ಸಹಕರಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
