UK Express Logo

ಚಂಡಮಾರುತ ಅಣಕು ಕಾರ್ಯಾಚರಣೆ ಯಶಸ್ವಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

By UKExpress on 10/2/2026

ಕಾರವಾರ: ಜಿಲ್ಲೆಯಲ್ಲಿ ಸಂಭವಿಸಬಹುದಾದ ಚಂಡಮಾರುತದಂತಹ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಅಂತರರಾಜ್ಯ ಚಂಡಮಾರುತ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ, ಎನ್‌ಡಿಆರ್‌ಎಫ್, ಬಂದರು, ಸ್ಥಳೀಯ ಸಂಸ್ಥೆಗಳು, ನೌಕಾಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಿತು.

ಚಂಡಮಾರುತದ ಸಂದರ್ಭದಲ್ಲಿ ಉಂಟಾಗಬಹುದಾದ ಭಾರಿ ಮಳೆ, ಬಿರುಗಾಳಿ, ಸಮುದ್ರದ ಅಬ್ಬರ, ಕಡಲ ಕೊರೆತ, ಪ್ರವಾಹ, ಮರಗಳ ಉರುಳುವಿಕೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಂತಹ ತುರ್ತು ಪರಿಸ್ಥಿತಿಗಳನ್ನು ಸೃಷ್ಟಿಸಿ, ವಿವಿಧ ಇಲಾಖೆಗಳ ಸಿದ್ಧತೆ ಹಾಗೂ ತುರ್ತು ಸ್ಪಂದನಾ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು.

ಬೈತಖೋಲ್‌ನ ತಗ್ಗು ಪ್ರದೇಶವನ್ನು ಚಂಡಮಾರುತದಿಂದ ತೀವ್ರವಾಗಿ ಬಾಧಿತ ಪ್ರದೇಶವೆಂದು ಪರಿಗಣಿಸಿ, ಅಪಾಯದಲ್ಲಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಿ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಕ್ರಿಮ್ಸ್ ಆಸ್ಪತ್ರೆ ಹಾಗೂ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಯಿತು. ಕ್ರಿಮ್ಸ್‌ನಲ್ಲಿ ಸಾಮೂಹಿಕ ಸಾವು-ನೋವು ನಿರ್ವಹಣೆಯ ಅಣಕು ಕಾರ್ಯಾಚರಣೆಯನ್ನೂ ನಡೆಸಲಾಯಿತು.

ಎನ್‌ಡಿಆರ್‌ಎಫ್ ಸೇರಿದಂತೆ ವೈದ್ಯಕೀಯ, ಪಶುಪಾಲನಾ ಹಾಗೂ ಪರಿಹಾರ ತಂಡಗಳು ಸ್ಥಳಕ್ಕೆ ತೆರಳಿ ತುರ್ತು ಕಾರ್ಯಾಚರಣೆ ನಡೆಸಿದವು.

ಕುಮಟಾ ಹೊಸ ಬಸ್ ನಿಲ್ದಾಣದ ಬಳಿ ಪ್ರವಾಹ ಉಂಟಾಗಿ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹಾನಿಯಾದ ಪರಿಸ್ಥಿತಿಯನ್ನು ಅಣಕು ಕಾರ್ಯಾಚರಣೆಯಲ್ಲಿ ಸೃಷ್ಟಿಸಲಾಯಿತು. ನಿವಾಸಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸರ್ಕಾರಿ ವಾಹನಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಸರ್ಕಾರಿ ಶಾಲೆಗಳು ಹಾಗೂ ಇತರ ಸುರಕ್ಷಿತ ಸ್ಥಳಗಳಲ್ಲಿ ಆಹಾರ, ಕುಡಿಯುವ ನೀರು, ವಿದ್ಯುತ್, ನೈರ್ಮಲ್ಯ ಮತ್ತು ವೈದ್ಯಕೀಯ ನೆರವು ಕಲ್ಪಿಸುವ ವ್ಯವಸ್ಥೆಯನ್ನು ಪ್ರದರ್ಶಿಸಲಾಯಿತು. ಟೌನ್ ಹಾಲ್ ಅನ್ನು ತಾತ್ಕಾಲಿಕ ಪರಿಹಾರ ಮತ್ತು ಆಶ್ರಯ ಕೇಂದ್ರವಾಗಿ ಸಿದ್ಧಪಡಿಸಲಾಯಿತು.

ಕಾಸರಕೋಡು ಹಿನ್ನೀರು ಪ್ರದೇಶದಲ್ಲಿ ಎರಡು ದೋಣಿಗಳು ಮುಳುಗಿದ ಪರಿಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ಒಂದು ದೋಣಿ ಸಂಪೂರ್ಣ ಮುಳುಗಿ ಒಬ್ಬರು ಮೃತಪಟ್ಟಿದ್ದು, ದೋಣಿಯಲ್ಲಿದ್ದ ಸುಮಾರು 20 ಮಂದಿಯನ್ನು ರಕ್ಷಿಸುವ ಅಣಕು ಕಾರ್ಯಾಚರಣೆ ನಡೆಯಿತು. ಗಾಯಗೊಂಡವರನ್ನು ವೈದ್ಯಕೀಯ ತಂಡಗಳ ನೆರವಿನಿಂದ ಸಮೀಪದ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. 12 ಪ್ರಾಣಿಗಳನ್ನೂ ರಕ್ಷಿಸಲಾಯಿತು.

ಮುರುಡೇಶ್ವರ ಬೀಚ್‌ನಲ್ಲಿ ಬಿರುಸಿನ ಸಮುದ್ರದ ಅಲೆಗಳಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ಅಣಕು ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮೀನುಗಾರಿಕೆ, ಕರಾವಳಿ ಭದ್ರತಾ ಪೊಲೀಸರು ಸೇರಿದಂತೆ ವಿವಿಧ ತಂಡಗಳು ಸಮನ್ವಯದಿಂದ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ಒದಗಿಸುವ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು.

ಪ್ರತಿಕೂಲ ಹವಾಮಾನದಿಂದ ತಡಡಿ ಬಂದರಿನಲ್ಲಿ ಎರಡು ಮೀನುಗಾರಿಕಾ ದೋಣಿಗಳು ಸಮುದ್ರದಲ್ಲಿ ಸಿಲುಕಿಕೊಂಡ ಪರಿಸ್ಥಿತಿಯನ್ನು ಸೃಷ್ಟಿಸಿ, ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ ನಡೆಸಲಾಯಿತು.

ತಗ್ಗು ಪ್ರದೇಶಗಳ ನಿವಾಸಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಮಾದನಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಆಹಾರ, ಕುಡಿಯುವ ನೀರು, ಆಶ್ರಯ, ನೈರ್ಮಲ್ಯ ಹಾಗೂ ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಲಾಯಿತು.

ಚಂಡಮಾರುತದ ಪರಿಣಾಮ ಬೆಳಸೆ ರೈಲ್ವೆ ಕಟಿಂಗ್‌ನಲ್ಲಿ ಭೂಕುಸಿತ ಸಂಭವಿಸಿ ರೈಲು ಸಂಚಾರಕ್ಕೆ ಅಡ್ಡಿಯಾದ ಪರಿಸ್ಥಿತಿಯನ್ನೂ ಅಣಕು ಕಾರ್ಯಾಚರಣೆಯಲ್ಲಿ ಸೃಷ್ಟಿಸಲಾಯಿತು. ರೈಲು ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಿ, ರೈಲ್ವೆ ಹಳಿಯಲ್ಲಿದ್ದ ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ರೈಲ್ವೆ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತುರ್ತು ಪರಿಸ್ಥಿತಿ ನಿರ್ವಹಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದವು.

ಕಾರ್ಯಾಚರಣೆಯ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ಗಳನ್ನು ಬಳಸಲಾಯಿತು. ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನೂ ಪರಿಶೀಲಿಸಲಾಯಿತು. ಚಂಡಮಾರುತದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಪ್ರಕ್ರಿಯೆಯನ್ನೂ ಅಣಕು ಕಾರ್ಯಾಚರಣೆಯಲ್ಲಿ ಪ್ರದರ್ಶಿಸಲಾಯಿತು.

ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಜಿಲ್ಲಾಡಳಿತದ ವತಿಯಿಂದ ಮಾಧ್ಯಮಗಳ ಮೂಲಕ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಸುಳ್ಳು ಸುದ್ದಿಗಳಿಂದ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟಾಗದಂತೆ ಮಾಹಿತಿ ಪ್ರಸಾರಕ್ಕೆ ಆದ್ಯತೆ ನೀಡಲಾಯಿತು.

ಅಣಕು ಕಾರ್ಯಾಚರಣೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ಕಂದಾಯ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.