ದಸರಾ ವಾಲಿಬಾಲ್ ಅಖಾಡದಲ್ಲಿ ಕುಮಟಾ ಸ್ಪೈಕರ್ಸ್ ಅಬ್ಬರ; ಚಾಂಪಿಯನ್ ಪಟ್ಟದೊಂದಿಗೆ ರಾಜ್ಯಮಟ್ಟಕ್ಕೆ ಲಗ್ಗೆ!

ಕುಮಟಾ: ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 29 ಮತ್ತು 30ರಂದು ನಡೆದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾ ಸ್ಪೈಕರ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯ ಫೈನಲ್ ಹಣಾಹಣಿಯಲ್ಲಿ ಕುಮಟಾ ಸ್ಪೈಕರ್ಸ್ ಹಾಗೂ ಬೆಳಗಾವಿ ತಂಡಗಳು ಮುಖಾಮುಖಿಯಾದವು.
ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕುಮಟಾ ಸ್ಪೈಕರ್ಸ್ ಆಟಗಾರರು ಸಂಘಟಿತ ಆಟ, ನಿಖರ ಸರ್ವ್, ಪರಿಣಾಮಕಾರಿ ಬ್ಲಾಕ್ ಹಾಗೂ ಸ್ಮ್ಯಾಶ್‌ಗಳ ಮೂಲಕ ಎದುರಾಳಿಗೆ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ 3–1 ಅಂತರದಲ್ಲಿ ಬೆಳಗಾವಿ ತಂಡವನ್ನು ಮಣಿಸಿ ವಿಭಾಗ ಮಟ್ಟದ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡರು.
ವಿಭಾಗ ಮಟ್ಟದಲ್ಲಿ ಅದ್ಭುತ ಗೆಲುವು ದಾಖಲಿಸಿರುವ ಕುಮಟಾ ಸ್ಪೈಕರ್ಸ್ ತಂಡ ಇದೀಗ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಲಗ್ಗೆ ಇಟ್ಟಿದೆ.
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಮೈಸೂರಿನ ಚಾಮುಂಡಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 11ರಿಂದ 14ರವರೆಗೆ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕುಮಟಾ ಸ್ಪೈಕರ್ಸ್ ತಂಡ ರಾಜ್ಯದ ವಿವಿಧ ಭಾಗಗಳ ತಂಡಗಳೊಂದಿಗೆ ಸೆಣಸಾಡಲಿದೆ.
ಕುಮಟಾ ಸ್ಪೈಕರ್ಸ್ ತಂಡದ ಪರವಾಗಿ ಮಣಿ ನಾಯಕ, ಸಂತೋಷ ಗೌಡ, ಯೋಗೇಶ ಪಟಗಾರ, ಯೋಗೇಶ ಗೌಡ, ದೀಪಕ ಪಟಗಾರ, ನಚೀಕೇತ ನಾಯ್ಕ, ನಾಗೇಂದ್ರ ಗೌಡ ಹಾಗೂ ರಜತ್ ಗೌಡ ಕಣಕ್ಕಿಳಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಭಾಗ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕುಮಟಾ ಸ್ಪೈಕರ್ಸ್ ತಂಡಕ್ಕೆ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಇದೀಗ ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕುಮಟಾ ಸ್ಪೈಕರ್ಸ್ ಮತ್ತೊಂದು ಗೆಲುವಿನ ಅಧ್ಯಾಯ ಬರೆಯುವ ನಿರೀಕ್ಷೆ ಮೂಡಿಸಿದೆ.
