
ಭಟ್ಕಳ: ತಾಲೂಕಿನ ಹೆಬಳೆ ಗ್ರಾಮದ ಫಿರ್ಧೋಸನಗರದ ಕೋಳಿ ಫಾರ್ಮ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಭಟ್ಕಳದ ಬೆಂಡೇಖಾನ, ಮೂಸಾನಗರ ನಿವಾಸಿ ಮೊಹಮ್ಮದ್ ಸಾಯಿಮ್ (31) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 2ರಂದು ಸಂಜೆ 6.30ರ ಸುಮಾರಿಗೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಹೆಬಳೆ ಗ್ರಾಮದ ಫಿರ್ಧೋಸನಗರದ ಕೋಳಿ ಫಾರ್ಮ್ ಸಮೀಪ ದಾಳಿ ನಡೆಸಿದರು. ಈ ವೇಳೆ ಗಾಂಜಾವನ್ನು ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹೊಂದಿದ್ದ ಆರೋಪಿಯು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಾಳಿಯಲ್ಲಿ 816 ಗ್ರಾಂ ಗಾಂಜಾ, ಅಂದಾಜು ₹81,600 ಮೌಲ್ಯದ ಮಾದಕ ವಸ್ತು, ತೂಕದ ಯಂತ್ರ, ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ಬ್ಯಾಗ್ ಹಾಗೂ ಮಾರುತಿ ಸುಜುಕಿ ಬರ್ಗ್‌ಮನ್ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ಕೂಟಿಯ ಅಂದಾಜು ಮೌಲ್ಯ ₹90,000 ಆಗಿದ್ದು, ಇತರ ವಸ್ತುಗಳನ್ನೂ ಸೇರಿಸಿ ಒಟ್ಟು ಸುಮಾರು ₹1.73 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜು ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಲ್, ನಿಂಗನಗೌಡ ಪಾಟೀಲ, ಮಂಜುನಾಥ ಖಾರ್ವಿ, ಅಂಬರೀಷ್ ಕುಂಬಾರಿ, ವಿನಯ ಮಬ್ರುಮಕರ್ ಹಾಗೂ ಚಾಲಕ ಸಂತೋಷ ಹಡಪದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ದೂರು ನೀಡಿದ್ದು, ಪಿಎಸ್‌ಐ ಭರಮಪ್ಪ ಬೆಳಗಲಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
