UK Express Logo

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸಾವು

By UKExpress on 10/1/2026

ಕಾರವಾರ: ತಾಲೂಕಿನ ಅರ್ಗಾ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಲಾರಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಸ್ಕೂಟಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಮೃತರನ್ನು ಬಿಣಗಾ ಮೂಲದ ನಿವಾಸಿ ಹಾಗೂ ಬಜಾಜ್ ಫೈನಾನ್ಸ್ ಸಿಬ್ಬಂದಿಯಾಗಿದ್ದ 42 ವರ್ಷದ ಗಣಪತಿ ಗೌಡ ಎಂದು ಗುರುತಿಸಲಾಗಿದೆ. ಕಾರವಾರದ ಸಂತೆಗೆ ತೆರಳಲು ಭಾನುವಾರ ಬಿಣಗಾದಿಂದ ಸ್ಕೂಟಿಯಲ್ಲಿ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಗಣಪತಿ ಗೌಡ ಅವರು ಸ್ಕೂಟಿಯಲ್ಲಿ ಕಾರವಾರದ ಕಡೆಗೆ ಬರುತ್ತಿದ್ದಾಗ, ಕಾರವಾರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಮೇಲೆ ಲಾರಿ ಹರಿದುಹೋಗಿದ್ದು, ಪರಿಣಾಮ ಸ್ಕೂಟಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಅಪಘಾತದಲ್ಲಿ ಗಣಪತಿ ಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತ ಸಂಭವಿಸಿದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪರಾರಿಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.