
ಅಂಕೋಲಾ: ಅಂಕೋಲಾ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್ ನಾಯಕ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೂಲತಃ ಅಗ್ರಗೋಣದವರಾದ ಪ್ರವೀಣ್ ನಾಯಕ್ ಅವರು ಪುರಲಕ್ಕಿಬೇಣಿಯಲ್ಲಿ ಸ್ವಂತ ನಿವೇಶನ ನಿರ್ಮಿಸಿಕೊಂಡು ವಾಸವಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಅಂಕೋಲಾ ಪುರಸಭೆಯಲ್ಲಿ ಸೇವೆ ಆರಂಭಿಸಿದ್ದ ಅವರು, ಹಲವು ವರ್ಷಗಳ ಕಾಲ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕೆಲಕಾಲ ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯತಿಯಲ್ಲಿ ಮುಖ್ಯಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅಂಕೋಲಾ ಪುರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಮುಂದುವರಿಸಿದ್ದರು.
ಮೃತರು ತಂದೆ, ಪತ್ನಿ ಪ್ರಿಯದರ್ಶಿನಿ, ಪುತ್ರಿ ಶಾಂಚಿ, ಪುತ್ರ ಶ್ಲೋಕ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಪ್ರವೀಣ್ ನಾಯಕ್ ಅವರ ಅಕಾಲಿಕ ನಿಧನಕ್ಕೆ ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಯೇಸು ಎಸ್. ಬೆಂಗಳೂರು, ಮ್ಯಾನೇಜರ್ ಬೀರಣ್ಣ ನಾಯಕ್ ಸೇರಿದಂತೆ ಪುರಸಭೆಯ ಹಿರಿಯ-ಕಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಮಾಜಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.
