
ಶಿರಸಿ: ನಗರದ ಎಂಇಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 23 ಮತ್ತು 25ರಂದು ನಡೆದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕಾಲೇಜಿನ 30 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಬಾಲಕಿಯರ ಟೇಬಲ್ ಟೆನಿಸ್ ತಂಡ ಪ್ರಥಮ ಸ್ಥಾನ, ಬಾಲಕರ ಟೇಬಲ್ ಟೆನಿಸ್ ತಂಡ ದ್ವಿತೀಯ ಸ್ಥಾನ, ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ತಂಡ ದ್ವಿತೀಯ ಸ್ಥಾನ, ಬಾಲಕರ ಬಾಸ್ಕೆಟ್‌ಬಾಲ್ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ವೈಯಕ್ತಿಕ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೆ.ಎಸ್. ನಿಶಾಂತ, ಕೃತಿಕಾ ನಾಗರಾಜ ಹೆಗಡೆ ಶಟಲ್ ಬ್ಯಾಡ್ಮಿಂಟನ್‌ನಲ್ಲಿ, ರೀಫಾ ಖಾನ್ ಕರಾಟೆಯಲ್ಲಿ ಪ್ರಥಮ ಸ್ಥಾನ, ದೀಕ್ಷಾ ಜಿ. ಹೆಗಡೆ ಚೆಸ್‌ನಲ್ಲಿ ಪ್ರಥಮ ಸ್ಥಾನ, ಸ್ಯಾಮುಲ್ ಮಚಾಡೋ 100 ಮೀ. ಓಟದಲ್ಲಿ ತೃತೀಯ ಸ್ಥಾನ ಹಾಗೂ ಅಕ್ಷಯ ಜಿ. ಭಟ್ ಮತ್ತು ಸಂಜಯ ನಾಯ್ಕ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.
