
ಯಲ್ಲಾಪುರ: ಯಲ್ಲಾಪುರ ಅರಣ್ಯ ವಲಯದ ಹಳಬೈಲ್ ಶಾಖಾ ವ್ಯಾಪ್ತಿಯ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಪ್ರಾಣಿ ಬೇಟೆಯಾಡಿ, ಮಾಂಸವನ್ನು ಮನೆಯಲ್ಲಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಇಬ್ಬರನ್ನು ಬಂಧಿಸಿದೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಳಿಯಾಳ ಕ್ರಾಸ್‌ನ ಇನಾಸ್ ಬಸ್ಥ್ಯಾಂವ್ ಸಿದ್ದಿ (55) ಹಾಗೂ ಅವರ ಪುತ್ರ ಪ್ರಕಾಶ್ ಇನಾಸ್ ಸಿದ್ದಿ (27) ಅವರ ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಮೃತಪಟ್ಟ ಎರಡು ಗಂಡು ಉಡಗಳು, ಬೇಟೆಗೆ ಬಳಸಿದ್ದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸೆಕ್ಷನ್ 2(16), 9, 39(ಎ) ಹಾಗೂ 50ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ನೇತೃತ್ವದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
