UK Express Logo

ಅಕ್ಟೋಬರ್ 1 ಮತ್ತು 4ರಂದು ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

By UKExpress on 10/1/2026

ಕಾರವಾರ: ಗಾಂಧಿ ಜಯಂತಿ ಸೇರಿದಂತೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆ ಬೆಂಗಳೂರು ಕ್ಯಾಂಟ್–ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಘೋಷಿಸಿದೆ.

ರೈಲು ಸಂಖ್ಯೆ 06597 ಬೆಂಗಳೂರು ಕ್ಯಾಂಟ್–ಮಡಗಾಂವ್ ವಿಶೇಷ ರೈಲು ಅಕ್ಟೋಬರ್ 1ರಂದು ರಾತ್ರಿ 11.50ಕ್ಕೆ ಬೆಂಗಳೂರು ಕ್ಯಾಂಟ್‌ನಿಂದ ಹೊರಡಲಿದೆ. ಅಕ್ಟೋಬರ್ 2ರಂದು ಈ ರೈಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಕಾರವಾರಕ್ಕೆ ಮಧ್ಯಾಹ್ನ 2.50ಕ್ಕೆ, ಅಂಕೋಲಾಕ್ಕೆ 3.20ಕ್ಕೆ, ಗೋಕರ್ಣ ರೋಡ್‌ಗೆ 3.32ಕ್ಕೆ, ಕುಮಟಾಕ್ಕೆ 3.50ಕ್ಕೆ, ಹೊನ್ನಾವರಕ್ಕೆ 4.02ಕ್ಕೆ, ಮುರುಡೇಶ್ವರಕ್ಕೆ 4.24ಕ್ಕೆ ಹಾಗೂ ಭಟ್ಕಳಕ್ಕೆ 4.38ಕ್ಕೆ ರೈಲು ಆಗಮಿಸಲಿದೆ. ಬಳಿಕ ಮಡಗಾಂವ್‌ಗೆ ತೆರಳಿ ಸಂಜೆ 6.10ಕ್ಕೆ ತಲುಪಲಿದೆ.

ಇದೇ ರೈಲು ರೈಲು ಸಂಖ್ಯೆ 06598 ಮಡಗಾಂವ್–ಬೆಂಗಳೂರು ಕ್ಯಾಂಟ್ ವಿಶೇಷ ರೈಲು ಆಗಿ ಅಕ್ಟೋಬರ್ 4ರಂದು ಬೆಳಗ್ಗೆ 8.40ಕ್ಕೆ ಮಡಗಾಂವ್‌ನಿಂದ ಹೊರಡಲಿದೆ. ಮರಳಿ ಪ್ರಯಾಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ 9.30ಕ್ಕೆ, ಅಂಕೋಲಾಕ್ಕೆ 10ಕ್ಕೆ, ಗೋಕರ್ಣ ರೋಡ್‌ಗೆ 10.12ಕ್ಕೆ, ಕುಮಟಾಕ್ಕೆ 10.30ಕ್ಕೆ, ಹೊನ್ನಾವರಕ್ಕೆ 10.42ಕ್ಕೆ, ಮುರುಡೇಶ್ವರಕ್ಕೆ 11.10ಕ್ಕೆ ಹಾಗೂ ಭಟ್ಕಳಕ್ಕೆ 11.24ಕ್ಕೆ ರೈಲು ಆಗಮಿಸಲಿದೆ.

ಭಟ್ಕಳದ ಬಳಿಕ ರೈಲು ಬೈಂದೂರು, ಕುಂದಾಪುರ, ಉಡುಪಿ ಸೇರಿದಂತೆ ಕರಾವಳಿ ಭಾಗದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿ ಬೆಂಗಳೂರು ಕಡೆಗೆ ಸಂಚರಿಸಲಿದೆ.

ರಜೆ ಅವಧಿಯಲ್ಲಿ ಬೆಂಗಳೂರು–ಉತ್ತರ ಕನ್ನಡ–ಗೋವಾ ನಡುವೆ ಪ್ರಯಾಣಿಸುವವರಿಗೆ ಈ ವಿಶೇಷ ರೈಲು ಸೇವೆಯಿಂದ ಅನುಕೂಲವಾಗಲಿದೆ. ಪ್ರಯಾಣಿಕರು ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.