
ಕುಮಟಾ: ಅಂಚೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಇನ್ನಷ್ಟು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶದಿಂದ ಕುಮಟಾದಲ್ಲಿ “ಇಂಡಿಯಾ ಪೋಸ್ಟ್ ಫ್ರಾಂಚೈಸಿ ಸೇವಾ ಕೇಂದ್ರ”ವನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಕುಮಟಾದ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕ ಅಂಚೆ ಸೇವೆಗಳ ನಿರ್ದೇಶಕ ಶ್ರೀಹರ್ಷ ಎನ್. ಅವರು ಸೋಮವಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಇಂತಹ ಶಿಬಿರಗಳು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ. ಮನೆ ಸಮೀಪದಲ್ಲಿಯೇ ಸರ್ಕಾರಿ ಸೇವೆಗಳನ್ನು ಪಡೆಯಲು ಅವಕಾಶ ದೊರೆಯುವುದರಿಂದ ಗ್ರಾಮೀಣ ಜನರು ವಿವಿಧ ಕೆಲಸಗಳಿಗಾಗಿ ಪಟ್ಟಣಗಳಿಗೆ ತೆರಳುವ ಶ್ರಮ ಕಡಿಮೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರವಾರ ಅಂಚೆ ವಿಭಾಗದಲ್ಲಿ ವಿವಿಧ ಸೇವಾ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ., ಉತ್ತರ ಕರ್ನಾಟಕ ಇಂಡಿಯಾ ಪೋಸ್ಟ್ ವಲಯ ಮುಖ್ಯಸ್ಥ ಸುರೇಶ್ ವಿ.ಪಿ., ನೀವಾ ಬುಪಾ ಆರೋಗ್ಯ ವಿಮೆಯ ದಕ್ಷಿಣ ಭಾರತ ಮಾರುಕಟ್ಟೆ ನಿಬಂಧಕ ಪ್ರವೀಣ್ ರಾಮಚಂದ್ರನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
