
ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಕೆ.ಬಿ. ಅನೀಶ್ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾನೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 30ರಂದು ನಡೆದ 8ನೇ ರಾಷ್ಟ್ರೀಯ ಮಟ್ಟದ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಅನೀಶ್ ಅತ್ಯುತ್ತಮ ಪ್ರದರ್ಶನ ನೀಡಿ ಮೊದಲ ಸ್ಥಾನ ಗಳಿಸಿದ್ದಾನೆ. ಈ ಸಾಧನೆಯೊಂದಿಗೆ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಇದಲ್ಲದೆ, ಅನೀಶ್ ತ್ರಿಕೋನಾಸನವನ್ನು ಸತತ ಮೂರು ನಿಮಿಷಗಳ ಕಾಲ ಪರಿಪೂರ್ಣವಾಗಿ ನಿರ್ವಹಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಈ ಪ್ರದರ್ಶನವು ವಿಶ್ವದಾಖಲೆಯ ಮಾನ್ಯತೆಗೆ ಪಾತ್ರವಾಗಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಯ ಸಾಧನೆಗೆ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಶಾಲಾ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅನೀಶ್ ಉತ್ತಮ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಲಿ ಎಂದು ಶುಭ ಹಾರೈಸಿದ್ದಾರೆ.
