UK Express Logo

ಜನರ ಅಹವಾಲು ಆಲಿಸಲು ಶಾಸಕರ ನೇತೃತ್ವದಲ್ಲಿ ಸೆ.5ರಂದು ಪ್ರಜಾಸೇವೆ ಆಂದೋಲನ

By UKExpress on 9/9/2026

ಕಾರವಾರ: ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಮನೆ ಬಾಗಿಲಿನಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ನೇತೃತ್ವದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳನ್ನು ಸೆ.5ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ವಿಧಾನಸಭಾ ಉಪಾಧ್ಯಕ್ಷ ಹಾಗೂ ಭಟ್ಕಳ–ಹೊನ್ನಾವರ ಶಾಸಕ ಮಂಕಾಳ ಎಸ್. ವೈದ್ಯ ಅವರ ನೇತೃತ್ವದಲ್ಲಿ ಭಟ್ಕಳ ತಾಲೂಕಿನ ಮಾವಳ್ಳಿ ಹೋಬಳಿಯ ಮುರ್ಡೇಶ್ವರದ ಆರ್.ಎನ್.ಎಸ್. ಸಭಾಭವನದಲ್ಲಿ ಸಭೆ ನಡೆಯಲಿದೆ.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ–ದಾಂಡೇಲಿ–ಜೋಯಿಡಾ ಶಾಸಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಹಳಿಯಾಳ ತಾಲೂಕಿನ ಸಂಬ್ರಾಣಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಭೆ ಆಯೋಜಿಸಲಾಗಿದೆ.

ಶಿರಸಿ–ಸಿದ್ದಾಪುರ ಶಾಸಕ ಭೀಮಣ್ಣ ಟಿ. ನಾಯ್ಕ ಅವರ ನೇತೃತ್ವದಲ್ಲಿ ಸಂಪಖಂಡ ಹೋಬಳಿಯ ಜಾನ್ಮನೆ ಗಜಾನನ ಪ್ರೌಢಶಾಲೆ ಸಭಾಭವನದಲ್ಲಿ, ಯಲ್ಲಾಪುರ–ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ ಅವರ ನೇತೃತ್ವದಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ಹೋಬಳಿಯ ರಾಜರಾಜೇಶ್ವರಿ ಸಮಾಜ ಮಂದಿರದಲ್ಲಿ ಸಭೆ ನಡೆಯಲಿದೆ.

ಕುಮಟಾ–ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಕುಮಟಾ ತಾಲೂಕಿನ ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಆಯೋಜಿಸಲಾಗಿದೆ.

ಈ ಸಭೆಗಳಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳು, ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಮೂಲಕ ಅರ್ಹ ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.