
ಹೊನ್ನಾವರ: ಟಿಪ್ಪರ್ ಲಾರಿಯ ಡೀಸೆಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿನ ದಾಪಗಾಲಮಕ್ಕಿ ನಿವಾಸಿ ಮೂಸಾ ಹಸನ್ ಸಾಬ್ ಎಂಬವರು ತಮ್ಮ ಟಿಪ್ಪರ್ ಲಾರಿಯ ಡೀಸೆಲ್ ಬ್ಯಾಂಕ್‌ನಲ್ಲಿದ್ದ ಸುಮಾರು 140 ಲೀಟರ್ ಡೀಸೆಲ್, ಅಂದಾಜು ₹14,500 ಮೌಲ್ಯದ, ಕಳ್ಳತನವಾಗಿರುವ ಕುರಿತು ಸೆ.1ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಆ.28ರ ರಾತ್ರಿ 9ರಿಂದ ಆ.29ರ ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡಕ್ಕೆ ದೊರೆತ ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಯೂನೂಸ್ ಶಬೀರ್ ಖಾನ್ (28), ಮಹ್ಮದ್ ಗೌಸ್ (38) ಹಾಗೂ ಸೈಯ್ಯದ್ ಸಿಕಂದರ್ (22) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಸೇರಿದಂತೆ ಡೀಸೆಲ್ ಕಳ್ಳತನಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಸ್ವತ್ತಿನ ಒಟ್ಟು ಮೌಲ್ಯ ಸುಮಾರು ₹1.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಜಿ. ಕೃಷ್ಣಮೂರ್ತಿ, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಮಹಾಂತೇಶ ವಾಲ್ಮೀಕಿ ನೇತೃತ್ವದಲ್ಲಿ ನಡೆಸಲಾಯಿತು.
ಪೊಲೀಸ್ ಸಿಬ್ಬಂದಿಗಳಾದ ಮನೋಜ್ ಡಿ., ರವಿ ನಾಯ್ಕ, ಗಜಾನನ ನಾಯ್ಕ, ಶಿವಾನಂದ ನಾಗರದಿನ್ನಿ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಮಹ್ಮದ್ ಶಫೀ, ಗಿರೀಶ್ ಮತ್ತು ಶೇಖರ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
