UK Express Logo

ಸೆ.3ರಂದು ಗೋಕರ್ಣ–ಕಾರವಾರ ಚಲೋ: ಮಾರಕ ಯೋಜನೆಗಳ ವಿರುದ್ಧ ಕರಾವಳಿ ಉಳಿಸಿ ಜಾಗೃತಿ ಅಭಿಯಾನ

By UKExpress on 9/9/2026

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಯೋಜನೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 3ರಂದು ಗುರುವಾರ “ಕರಾವಳಿ ಉಳಿಸಿ ಜಾಗೃತಿ ಅಭಿಯಾನ” ಹಮ್ಮಿಕೊಳ್ಳಲಾಗಿದೆ.

ಗೋಕರ್ಣದಿಂದ ಕಾರವಾರದವರೆಗೆ ನಡೆಯಲಿರುವ ಈ ಜಾಗೃತಿ ಅಭಿಯಾನವು ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.

ಉತ್ತರ ಕನ್ನಡ ಜಿಲ್ಲೆಯ ಹಿತಾಸಕ್ತಿ, ಪರಿಸರ, ನದಿಗಳು ಹಾಗೂ ಕರಾವಳಿ ಪ್ರದೇಶದ ಸಂರಕ್ಷಣೆಯ ದೃಷ್ಟಿಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸೆಪ್ಟೆಂಬರ್ 3ರಂದು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಅಭಿಯಾನಕ್ಕೆ ಕೈಜೋಡಿಸುವ ಮೂಲಕ ಕರಾವಳಿ ಹಾಗೂ ಜಿಲ್ಲೆಯ ರಕ್ಷಣೆಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

“ಕರಾವಳಿ ಉಳಿಸಿ – ಪರಿಸರ ರಕ್ಷಿಸಿ – ಉತ್ತರ ಕನ್ನಡ ಉಳಿಸಿ” ಎಂಬ ಸಂದೇಶದೊಂದಿಗೆ ಈ ಜಾಗೃತಿ ಅಭಿಯಾನ ನಡೆಯಲಿದೆ.