
ಕಾರವಾರ: ನಗರದ ಮೀನು ಮಾರುಕಟ್ಟೆ ವ್ಯಾಪ್ತಿಯಲ್ಲಿ ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ ವ್ಯಕ್ತಿಯೊಬ್ಬನನ್ನು ಕಾರವಾರ ನಗರ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಗೋವಾದ ಪೋಂಡಾದಲ್ಲಿರುವ ಗಣೇಶೋತ್ಸವ ಸಮಿತಿಯೊಂದರ ಹೆಸರಿನಲ್ಲಿ ₹500 ಮುಖಬೆಲೆಯ ಲಾಟರಿ ಟಿಕೆಟ್‌ಗಳನ್ನು ತರಿಸಿ, ಹೆಚ್ಚಿನ ಮೊತ್ತದ ಬಹುಮಾನದ ಆಮಿಷವೊಡ್ಡಿ ಸಾರ್ವಜನಿಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲೇ ಲಾಟರಿ ಟಿಕೆಟ್‌ಗಳ ಮಾರಾಟದಲ್ಲಿ ತೊಡಗಿದ್ದ ಗೋವಾ ಮೂಲದ ವಿನೋದ ಸುರೇಶ ವಾಂಗಲೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮ ಲಾಟರಿ ಮಾರಾಟದ ಹಿಂದಿರುವವರ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿಸಿದ್ದಾರೆ.
