UK Express Logo

ದೇಶದಲ್ಲೇ ಮೊದಲು: ಕಾರವಾರದಲ್ಲಿ ಕಲ್ವರಿ ಸಬ್‌ಮೆರಿನ್ ನಿರ್ವಹಣಾ ಘಟಕ ಆರಂಭ - ಜಲಾಂತರ್ಗಾಮಿಗಳ ದುರಸ್ತಿಗೆ ಫ್ರಾನ್ಸ್ ಮೇಲಿದ್ದ ಅವಲಂಬನೆಗೆ ಬ್ರೇಕ್: ಆತ್ಮನಿರ್ಭರ ಭಾರತದತ್ತ ಹೆಮ್ಮೆಯ ಹೆಜ್ಜೆ

By UKExpress on 3/19/2026
Featured Image ಕಾರವಾರ: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ 'ಕಲ್ವರಿ ದರ್ಜೆಯ ಜಲಾಂತರ್ಗಾಮಿ (ಸಬ್‌ಮೆರಿನ್)' ನೌಕೆಗಳ ನಿರ್ವಹಣಾ ಘಟಕವನ್ನು ಆರಂಭಿಸಲಾಗಿದೆ. ಈ ಮೂಲಕ ಅತ್ಯಾಧುನಿಕ ಜಲಾಂತರ್ಗಾಮಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಫ್ರಾನ್ಸ್‌ ದೇಶದ ಮೇಲಿದ್ದ ಅವಲಂಬನೆ ತಪ್ಪಿದಂತಾಗಿದೆ. 20260319 144054 ಭಾರತೀಯ ನೌಕಾಪಡೆಯ ಚೀಫ್ ಆಫ್ ಮೆಟೀರಿಯಲ್ (COM), ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಅವರು ಕದಂಬ ನೌಕಾ ನೆಲೆಯ ತಾಂತ್ರಿಕ ವರ್ಕ್‌ಶಾಪ್‌ನಲ್ಲಿ ಈ ಮಹತ್ವದ "ನ್ಯೂಮ್ಯಾಟಿಕ್ ರ್ಯಾಮ್ ಟೆಸ್ಟ್ ಫೆಸಿಲಿಟಿ"ಯನ್ನು (Pneumatic RAM test facility) ಅಧಿಕೃತವಾಗಿ ಉದ್ಘಾಟಿಸಿದರು. ಉಳಿತಾಯವಾಗಲಿದೆ ಸಮಯ ಮತ್ತು ಹಣ: ಈವರೆಗೆ ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳಲ್ಲಿ ಅಳವಡಿಸಲಾಗಿರುವ ಅತ್ಯಂತ ನಿರ್ಣಾಯಕ ‘ನ್ಯೂಮ್ಯಾಟಿಕ್’ ವ್ಯವಸ್ಥೆಗಳ ಪರೀಕ್ಷೆ ಮತ್ತು ದುರಸ್ತಿಗಾಗಿ ನೌಕಾ ಬಿಡಿಭಾಗಗಳನ್ನು ಫ್ರಾನ್ಸ್‌ಗೆ ಕಳುಹಿಸಬೇಕಾಗಿತ್ತು. ಇದರಿಂದಾಗಿ ಕೆಲಸ ಮುಗಿದು ಬರಲು ಸಾಕಷ್ಟು ಸಮಯ ಬೇಕಾಗುತ್ತಿತ್ತು ಮತ್ತು ಸಾಗಣೆ ವೆಚ್ಚ (Logistical costs) ಕೂಡ ಅಧಿಕವಾಗುತ್ತಿತ್ತು. ಇದೀಗ ಸ್ಥಳೀಯವಾಗಿಯೇ ಈ ಘಟಕ ಆರಂಭಗೊಂಡಿರುವುದು ನೌಕಾಪಡೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದ್ದು, 'ಆತ್ಮನಿರ್ಭರ ಭಾರತ' ಸಂಕಲ್ಪಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ವಿಶ್ವದಲ್ಲೇ ಮೂರನೇ ರಾಷ್ಟ್ರ ಭಾರತ: ಗಮನಾರ್ಹ ಸಂಗತಿಯೆಂದರೆ, ಈ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ (MRO) ಸೌಲಭ್ಯವು ಪ್ರಸ್ತುತ ವಿಶ್ವದ ಕೇವಲ ಮೂರು ದೇಶಗಳಲ್ಲಿ ಮಾತ್ರ ಲಭ್ಯವಿದೆ. ಫ್ರಾನ್ಸ್ ಮತ್ತು ಬ್ರೆಜಿಲ್ ಹೊರತುಪಡಿಸಿದರೆ ಭಾರತ ಈ ಸೌಲಭ್ಯ ಹೊಂದಿರುವ ಮೂರನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತೀಯ ಎಂಎಸ್‌ಎಂಇ ಪಾಲುದಾರ ಸಂಸ್ಥೆಯಾದ ‘ಎಸ್‌ಇಸಿ ಇಂಡಸ್ಟ್ರೀಸ್’ ಹಾಗೂ 'ನೇವಲ್ ಗ್ರೂಪ್ ಇಂಡಿಯಾ' ಸಹಯೋಗದಲ್ಲಿ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಏನಿದು ಕಲ್ವರಿ ಸಬ್‌ಮೆರಿನ್?: ಕಲ್ವರಿ ವರ್ಗದ ಜಲಾಂತರ್ಗಾಮಿಗಳು ಭಾರತೀಯ ನೌಕಾಪಡೆಯ ಅತ್ಯಾಧುನಿಕ ಡೀಸೆಲ್-ಎಲೆಕ್ಟ್ರಿಕ್ ದಾಳಿಯ ಸಬ್‌ಮೆರಿನ್‌ಗಳಾಗಿವೆ. ಫ್ರಾನ್ಸ್‌ನ 'ಸ್ಕಾರ್ಪಿನ್' ವಿನ್ಯಾಸವನ್ನು ಆಧರಿಸಿ, ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ಸಹಯೋಗದಲ್ಲಿ 'ಮೇಕ್ ಇನ್ ಇಂಡಿಯಾ' ಅಡಿ ಇವುಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಇವು ಸಮುದ್ರದಾಳದಲ್ಲಿ ಅತ್ಯಂತ ಕಡಿಮೆ ಶಬ್ದ ಮಾಡಲಿದ್ದು, ಶತ್ರುಗಳ ರೇಡಾರ್ ಅಥವಾ ಸೋನಾರ್‌ಗೆ ಸುಲಭವಾಗಿ ಪತ್ತೆಯಾಗುವುದಿಲ್ಲ (ಸೈಲೆಂಟ್ ಕಿಲ್ಲರ್). ಪ್ರಬಲ ಟಾರ್ಪಿಡೋಗಳು ಹಾಗೂ ಆ್ಯಂಟಿ-ಶಿಪ್ ಕ್ಷಿಪಣಿಗಳ ಮೂಲಕ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ 6 ಕಲ್ವರಿ ಜಲಾಂತರ್ಗಾಮಿಗಳು ಸೇವೆ ಸಲ್ಲಿಸುತ್ತಿವೆ. ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶ: ಕಾರವಾರದ ಕದಂಬ ನೌಕಾನೆಲೆಯ 'ಸೀಬರ್ಡ್ ಫೇಸ್-2' ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿ ಸಬ್‌ಮೆರಿನ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಲಾಂತರ್ಗಾಮಿಗಳ ಬಿಡಿಭಾಗಗಳ ಸ್ವದೇಶೀಕರಣಕ್ಕೆ ನೇವಲ್ ಗ್ರೂಪ್ ಇಂಡಿಯಾ ನಿರಂತರ ಬೆಂಬಲ ನೀಡುತ್ತಿದ್ದು, ಭವಿಷ್ಯದಲ್ಲಿ ಕಾರವಾರವು ಜಲಾಂತರ್ಗಾಮಿಗಳ ನಿರ್ವಹಣೆಯ ಪ್ರಮುಖ ಕೇಂದ್ರವಾಗಿ (Centre of Excellence) ರೂಪುಗೊಳ್ಳಲಿದೆ. ಇದು ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ವಿಪುಲ ಅವಕಾಶ ಕಲ್ಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 20260319 144054