ಬಂಗಾರಮಕ್ಕಿ ಶ್ರೀಕ್ಷೇತ್ರಕ್ಕೆ ಟೀಂ ಇಂಡಿಯಾ 'ಥ್ರೋಡೌನ್ ಸ್ಪೆಷಲಿಸ್ಟ್' ರಾಘವೇಂದ್ರ ದಿವಗಿ ಭೇಟಿ
ukexpress:
ಹೊನ್ನಾವರ: ಇತ್ತೀಚೆಗಷ್ಟೇ ಟಿ-20 ವಿಶ್ವಕಪ್ ಗೆದ್ದು ಬೀಗಿರುವ ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನ ಹಿಂದಿನ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ತಂಡದ ‘ಥ್ರೋಡೌನ್ ಸ್ಪೆಷಲಿಸ್ಟ್’ ರಾಘವೇಂದ್ರ ದಿವಗಿ ಅವರು ವಿಶ್ವಕಪ್ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರೂರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಆಗಮಿಸಿದ್ದಾರೆ.
ಮೂಲತಃ ಕುಮಟಾ ತಾಲೂಕಿನ ದಿವಗಿ ಗ್ರಾಮದವರಾದ ರಾಘವೇಂದ್ರ ಅವರ ಆಗಮನವು ಸ್ಥಳೀಯರಲ್ಲಿ ತೀವ್ರ ಹರ್ಷ ಹಾಗೂ ಸಂಭ್ರಮವನ್ನುಂಟುಮಾಡಿದ್ದು, ಸಾರ್ವಜನಿಕರು ತಮ್ಮ ಹೆಮ್ಮೆಯ ಸಾಧಕನಿಗೆ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸ್ವಗ್ರಾಮಕ್ಕೆ ಆಗಮಿಸಿದ ಬೆನ್ನಲ್ಲೇ ರಾಘವೇಂದ್ರ ಅವರು ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಪ್ರಸಿದ್ಧ ವೀರಾಂಜನೇಯ ಮಹಾ ಸಂಸ್ಥಾನ ಬಂಗಾರಮಕ್ಕಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಶುಭ ಸಂದರ್ಭದಲ್ಲಿ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ರಾಘವೇಂದ್ರ ಅವರಿಗೆ ಆಶೀರ್ವಚನ ನೀಡಿ, ದೇಶವೇ ಹೆಮ್ಮೆಪಡುವಂತಹ ಅವರ ಕ್ರೀಡಾ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದರು. ಇದೇ ವೇಳೆ ಸಂಸ್ಥಾನದ ವತಿಯಿಂದ ರಾಘವೇಂದ್ರ ದಿವಗಿ ಅವರನ್ನು ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.
ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಹಾಗೂ ಪ್ರಮುಖ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ರಾಘವೇಂದ್ರ ಅವರು 2011 ರಿಂದಲೂ ಟೀಂ ಇಂಡಿಯಾದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸೈಡ್-ಆರ್ಮ್ ಮೂಲಕ ಸುಮಾರು 140-150 ಕಿ.ಮೀ ವೇಗದಲ್ಲಿ ನಿಖರವಾಗಿ ಚೆಂಡುಗಳನ್ನು ಎಸೆಯುವ ಕೌಶಲ್ಯ ಹೊಂದಿರುವ ಇವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ತಂಡದ ಸ್ಟಾರ್ ಬ್ಯಾಟರ್‌ಗಳ ನೆಟ್ ಅಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಈ ತೆರೆಮರೆಯ ಕಠಿಣ ಶ್ರಮವೇ ವಿಶ್ವಕಪ್‌ನಂತಹ ಬೃಹತ್ ಟೂರ್ನಿಗಳಲ್ಲಿ ಭಾರತೀಯ ಬ್ಯಾಟರ್‌ಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
