ಗೋಕರ್ಣ ಸಮೀಪ ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ: ಕುಮಟಾ ಉಪವಿಭಾಗಾಧಿಕಾರಿಗಳಿಂದ ನಿಷೇಧಾಜ್ಞೆ ಜಾರಿ
ಕುಮಟಾ: ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್ ಮತ್ತು ಹೋಂ ಸ್ಟೇಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕುಮಟಾ ಉಪವಿಭಾಗಾಧಿಕಾರಿಗಳು ಆಯ್ದ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ನಾಡುಮಾಸ್ಕೇರಿ ಪಂಚಾಯತ್ ವ್ಯಾಪ್ತಿಯ ದುಬ್ಬನಸಸಿ, ಭಾವಿಕೊಡ್ಲ ಹಾಗೂ ಗಂಗೆಕೊಳ್ಳ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಲಾಗಿರುವ ರೆಸಾರ್ಟ್ ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಈ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳೀಯ ಮಾಲೀಕರಿಂದ ಅಥವಾ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರ ಅಡಿಯಲ್ಲಿ ಮಾರ್ಚ್ 09, 2026ರ ಬೆಳಗ್ಗೆ 10:00 ಗಂಟೆಯಿಂದ ಮಾರ್ಚ್ 10, 2026ರ ಬೆಳಗ್ಗೆ 10:00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ಸದರಿ ಪ್ರದೇಶದ ಸಮುದ್ರ ತೀರದಲ್ಲಿ ಸಾರ್ವಜನಿಕರು ಮೀನುಗಾರಿಕೆ ಅಥವಾ ಇನ್ನಿತರ ಉದ್ದೇಶಗಳಿಗಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆ ಹಾಗೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಯಾವುದೇ ಪ್ರತಿಭಟನೆ ಅಥವಾ ಅಡ್ಡಿಪಡಿಸುವ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿ ಉಂಟುಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ ದಂಡಾಧಿಕಾರಿಗಳಾದ ಪಿ. ಶ್ರವಣ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
