ಕುಮಟಾದಲ್ಲಿ ಹಗಲು ಹೊತ್ತಲ್ಲೇ ಮನೆಗೆ ಕನ್ನ; 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳವು
ಕುಮಟಾ: ತಾಲೂಕಿನ ಕೂಜಳ್ಳಿ ಗ್ರಾಮದ ಕೆಳಗಿನ ಕೂಜಳ್ಳಿಯಲ್ಲಿ ಹಗಲು ಹೊತ್ತಲ್ಲೇ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಮಾ. 16ರಂದು ನಡೆದಿದೆ.
ಕೂಲಿ ಕಾರ್ಮಿಕರಾಗಿರುವ ಕೆಳಗಿನ ಕೂಜಳ್ಳಿಯ ನಿವಾಸಿ ಚಂದ್ರಕಾಂತ ಸುಕ್ರು ಗೌಡ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸೋಮವಾರ ಬೆಳಿಗ್ಗೆ 9:30 ರಿಂದ 11:30ರ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಕಳ್ಳರು ಮನೆಯ ಹಿಂದಿನ ಸಿಮೆಂಟ್ ಶೀಟಿನ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಬಳಿಕ ಮನೆಯೊಳಗಿನ ಮತ್ತೊಂದು ಬಾಗಿಲನ್ನು ಮುರಿದು, ದೇವರಕೋಣೆಯಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಒಡವೆ ಹಾಗೂ ಹಣವನ್ನು ಕದ್ದೊಯ್ದಿದ್ದಾರೆ.
ಅಂದಾಜು 2 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಒಂದು ದೊಡ್ಡ ಬಂಗಾರದ ಮಾಂಗಲ್ಯ ಸರ, 1 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಸಣ್ಣ ಬಂಗಾರದ ಮಾಂಗಲ್ಯ ಸರ ಹಾಗೂ ಸುಮಾರು 15 ರಿಂದ 20 ಸಾವಿರ ರೂಪಾಯಿಗಳ ನಗದು ಕಳುವಾಗಿದೆ. ಒಟ್ಟಾರೆ 3 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಕಳುವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಚಂದ್ರಕಾಂತ ಅವರು ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಕುಮಟಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೀಶ್ ಕೆ.ಎಮ್. ಹಾಗೂ ಪಿ.ಎಸ್.ಐ ಮಯೂರ ಪಟ್ಟಣಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.