ಬೇಡ್ತಿ–ಅಘನಾಶಿನಿ ಹೋರಾಟಕ್ಕೆ ಕೋತಿಯೂ ಸಾಥ್! ಘೋಷಣಾ ಫಲಕ ಹಿಡಿದು ಕುಳಿತ ವಾನರ

ಯಲ್ಲಾಪುರ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನಡೆದ ಹೋರಾಟದ ಕಾವು ಇನ್ನೂ ತಣ್ಣಗಾಗಿಲ್ಲ. ಇದರ ಬೆನ್ನಲ್ಲೇ ಯಲ್ಲಾಪುರ ಪಟ್ಟಣದಲ್ಲಿ ಕೋತಿಯೊಂದು ಹೋರಾಟದ ಘೋಷಣಾ ಫಲಕ ಹಿಡಿದು ಕುಳಿತಿರುವ ಅಪರೂಪದ ದೃಶ್ಯ ಸಾರ್ವಜನಿಕರ ಗಮನ ಸೆಳೆದಿದೆ.
ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ರಸ್ತೆಯ ಬದಿಯಲ್ಲಿ ಈ ಘಟನೆ ನಡೆದಿದೆ. ನದಿ ತಿರುವು ಯೋಜನೆ ವಿರೋಧಿಸಿ ಇತ್ತೀಚೆಗೆ ನಡೆದ ಬೃಹತ್ ಹೆದ್ದಾರಿ ತಡೆ ಹೋರಾಟದ ಸಂದರ್ಭದಲ್ಲಿ ಬಳಸಲಾಗಿದ್ದ 'ಬೇಡ್ತಿ ಬಿಡೆವು–ಅಘನಾಶಿನಿ ಕೊಡೆವು' ಎಂಬ ಘೋಷಣಾ ಫಲಕವನ್ನು ಯಾರೋ ರಸ್ತೆ ಬದಿಯ ಕಾಂಪೌಂಡ್‌ಗೆ ಸಿಕ್ಕಿಸಿ ಹೋಗಿದ್ದರು.
ಈ ನಡುವೆ ಮರದಿಂದ ಕೆಳಗಿಳಿದು ಬಂದ ಕೋತಿಯೊಂದು ಫಲಕದ ಕೋಲನ್ನು ಹಿಡಿದುಕೊಂಡು ಅದರ ಪಕ್ಕದಲ್ಲಿ ಕುಳಿತಿದೆ. ಹೋರಾಟದ ಘೋಷಣಾ ಫಲಕವನ್ನು ಕೋತಿಯೊಂದು ಹಿಡಿದು ಕುಳಿತಿರುವ ಈ ಅಪರೂಪದ ಕ್ಷಣವನ್ನು ಸ್ಥಳೀಯರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ದೃಶ್ಯ ಇದೀಗ ಕುತೂಹಲಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಇದಕ್ಕೆ ಹಾಸ್ಯಮಿಶ್ರಿತವಾಗಿ ವಿಭಿನ್ನ ಅರ್ಥ ಕಲ್ಪಿಸುತ್ತಿದ್ದಾರೆ. ನದಿ ಉಳಿವಿನ ಹೋರಾಟ ಮನುಷ್ಯರಿಗಷ್ಟೇ ಸೀಮಿತವಲ್ಲ, ನದಿಯನ್ನು ಅವಲಂಬಿಸಿರುವ ಮೂಕಪ್ರಾಣಿಗಳ ಬದುಕಿನ ಪ್ರಶ್ನೆಯೂ ಹೌದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ, ಕೋತಿಯೊಂದು ಆಕಸ್ಮಿಕವಾಗಿ ಫಲಕ ಹಿಡಿದು ಕುಳಿತಿದ್ದರೂ, ಅದರ ಮೇಲಿದ್ದ ಘೋಷಣೆ ಮಾತ್ರ ಬೇಡ್ತಿ–ಅಘನಾಶಿನಿ ನದಿ ಉಳಿವಿನ ಹೋರಾಟದ ಆಶಯವನ್ನು ಮತ್ತೊಮ್ಮೆ ನೆನಪಿಸುವಂತಿತ್ತು. ಪ್ರಕೃತಿಯ ಮೌನ ಪ್ರತಿಕ್ರಿಯೆಯಂತೆ ಕಂಡ ಈ ದೃಶ್ಯ ಈಗ ವಿಶೇಷ ಗಮನ ಸೆಳೆಯುತ್ತಿದೆ.
