UK Express Logo

ಭಟ್ಕಳದಲ್ಲಿ ಕಾರು–ಬೊಲೆರೋ ಪಿಕಪ್ ಮುಖಾಮುಖಿ ಡಿಕ್ಕಿ: 7 ಮಂದಿ ಗಾಯ

By UKExpress on 11/15/2026

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಬೊಲೆರೋ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಏಳು ಮಂದಿ ಗಾಯಗೊಂಡ ಘಟನೆ ನವೆಂಬರ್ 13ರ ರಾತ್ರಿ ನಡೆದಿದೆ.

ಕೇರಳ ಮೂಲದ ಮಿಸ್ತ್ರಿಯಾ ಎಂಬುವವರು ಹುಂಡೈ ವೆನ್ಯೂ ಕಾರನ್ನು ಕುಂದಾಪುರ ಕಡೆಯಿಂದ ಭಟ್ಕಳದತ್ತ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ, ಭಟ್ಕಳ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಬೊಲೆರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಬೊಲೆರೋ ಪಿಕಪ್ ಚಾಲಕ ರವೀಂದ್ರ ಮಂಜಪ್ಪ ನಾಯ್ಕ (43), ಶಿರಾಲಿ, ಶಾರದಾ ಹೊಳೆ ಹಾಗೂ ವಾಹನದಲ್ಲಿದ್ದ ಸುಬ್ರಾಯ ಕೃಷ್ಣ ಮೊಗೇರ, ಅಳ್ವೆಕೋಡಿ ಸೇರಿದಂತೆ ಕಾರಿನಲ್ಲಿದ್ದ ಕೇರಳ ಮೂಲದ ಫಾತೀಮಾ ಮರ್ವಾ, ಫಾತೀಮಾ ಎ.ಎ., ಅರ್ಫಾ, ಆಫ್ರಿದ್ ಮತ್ತು ರಿಮ್ಲಾ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.