UK Express Logo
BREAKING

ಯಲ್ಲಾಪುರ: ಚೆಕ್‌ಡ್ಯಾಮ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

By UKExpress on 11/16/2026

ಯಲ್ಲಾಪುರ: ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೆಕ್‌ಡ್ಯಾಮ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ದಬ್ಬಗುಳಿ ಸಮೀಪ ಭಾನುವಾರ (ನ.15) ನಡೆದಿದೆ.

ಮೃತರನ್ನು ಯಲ್ಲಾಪುರದ ಶಾರದಾಗಲ್ಲಿಯ ಸುಬ್ರಾಯ ಶ್ರೀನಿವಾಸ ಶೇಟ್ (54) ಎಂದು ಗುರುತಿಸಲಾಗಿದೆ. ಇವರು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ನ.15ರಂದು ಸುಬ್ರಾಯ ಶೇಟ್ ಅವರು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಒಂದು ದಿನದ ಪ್ರವಾಸಕ್ಕಾಗಿ ಅರಬೈಲ್ ಗ್ರಾಮದ ದಬ್ಬಗುಳಿ ಸಮೀಪದ ಹಳ್ಳದ ಚೆಕ್‌ಡ್ಯಾಮ್‌ಗೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಸುಮಾರು 4.30ರ ವೇಳೆಗೆ ಚೆಕ್‌ಡ್ಯಾಮ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಆಳಕ್ಕೆ ಹೋಗಿ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರ ಪುತ್ರ ಅಜೀತ್ ಶೇಟ್ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರಾಜಶೇಖರ ವಂದಲಿ ತನಿಖೆ ಕೈಗೊಂಡಿದ್ದಾರೆ.