UK Express Logo

ಆಧಾರ್ ಕೆಲಸಕ್ಕೆ ಇನ್ಮುಂದೆ ಅಲೆದಾಟ ಬೇಡ: ಕಾರವಾರದಲ್ಲಿ ವಾರದ 7 ದಿನವೂ ಸೇವೆ ನೀಡುವ ಕೇಂದ್ರ ಆರಂಭ

By UKExpress on 11/15/2026

ಕಾರವಾರ: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಹೊಸ ನೋಂದಣಿ, ವೈಯಕ್ತಿಕ ಮಾಹಿತಿ ತಿದ್ದುಪಡಿ, ಫೋಟೋ ಬದಲಾವಣೆ ಹಾಗೂ ಬಯೋಮೆಟ್ರಿಕ್ ಅಪ್‌ಡೇಟ್ ಸೇರಿದಂತೆ ವಿವಿಧ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಕಾರವಾರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ ಆರಂಭಿಸಲಾಗಿದೆ.

ಕಾರವಾರದ ಕೋಣೆಕರ್ವಾಡದ ವಿರಾಟ್ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಬೆಂಗಳೂರು ಪ್ರಾದೇಶಿಕ ಕಚೇರಿ ವತಿಯಿಂದ ಸ್ಥಾಪಿಸಲಾದ ಈ ಕೇಂದ್ರವನ್ನು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಆಧಾರ್‌ಗೆ ಸಂಬಂಧಿಸಿದ ಸೇವೆಗಳಿಗಾಗಿ ಸಾರ್ವಜನಿಕರು ಗ್ರಾಮ ಒನ್, ಕರ್ನಾಟಕ ಒನ್, ಬ್ಯಾಂಕ್ ಹಾಗೂ ಅಂಚೆ ಕಚೇರಿಗಳನ್ನು ಅವಲಂಬಿಸಬೇಕಾಗಿತ್ತು. ಇದರಿಂದ ಕೆಲವೊಮ್ಮೆ ಅನಗತ್ಯ ಅಲೆದಾಟ ಮತ್ತು ವಿಳಂಬ ಉಂಟಾಗುತ್ತಿತ್ತು. ಇದೀಗ ಪ್ರತ್ಯೇಕ ಆಧಾರ್ ಸೇವಾ ಕೇಂದ್ರ ಆರಂಭಿಸಿರುವುದರಿಂದ ಸಾರ್ವಜನಿಕರಿಗೆ ಒಂದೇ ಸೂರಿನಡಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ಕೇಂದ್ರದಲ್ಲಿ ಹೊಸ ಆಧಾರ್ ನೋಂದಣಿ, ವೈಯಕ್ತಿಕ ಮಾಹಿತಿ ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್, ಫೋಟೋ ಸೆರೆಹಿಡಿಯುವಿಕೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿರಲಿವೆ. ಬಗೆಹರಿಸಲಾಗದ ಅಹವಾಲುಗಳನ್ನು ಹೆಚ್ಚಿನ ಪರಿಹಾರಕ್ಕಾಗಿ ಬೆಂಗಳೂರಿನ ಯುಐಡಿಎಐ ಪ್ರಾದೇಶಿಕ ಕಚೇರಿಗೆ ರವಾನಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ನೂತನ ಕೇಂದ್ರವು ವಾರದ ಏಳು ದಿನಗಳೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ನೋಂದಣಿ ಕಿಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ಸಾರ್ವಜನಿಕರ ಜೊತೆಗೆ ಎನ್‌ಪಿಸಿಐಎಲ್ ಕೈಗಾ, ಸೀಬರ್ಡ್, ಗ್ರಾಸೀಂ ಇಂಡಸ್ಟ್ರೀಸ್ ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೂ ಈ ಕೇಂದ್ರದಿಂದ ಅನುಕೂಲವಾಗಲಿದೆ.

ಗಾಲಿಕುರ್ಚಿ ಬಳಕೆದಾರರಿಗೆ ಅನುಕೂಲಕರ ಪ್ರವೇಶ ವ್ಯವಸ್ಥೆ, ಸುಲಭವಾಗಿ ಬಳಸಬಹುದಾದ ಶೌಚಾಲಯ ಹಾಗೂ ಪ್ರತ್ಯೇಕ ಅಹವಾಲು ಪರಿಹಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಮುಂಗಡ ಸಮಯ ನಿಗದಿಪಡಿಸಿಕೊಂಡು ಸೇವೆ ಪಡೆಯಬಹುದಾಗಿದೆ.

ಮುಂಗಡ ಸಮಯ ನಿಗದಿಗೆ: https://bookappointment.uidai.gov.in/

ಕರ್ನಾಟಕದಲ್ಲಿ ಒಟ್ಟು 25 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯುಐಡಿಎಐ ಗುರಿ ಕಾರವಾರದ ಈ ಕೇಂದ್ರದ ಕಾರ್ಯಾರಂಭದೊಂದಿಗೆ ಸಾಧನೆಯಾಗಿದೆ.

ಕಾರ್ಯಕ್ರಮದಲ್ಲಿ ಯುಐಡಿಎಐ ನಿರ್ದೇಶಕ ಮನೋಜ್ ಕುಮಾರ್, ಬೆಂಗಳೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಮೊಹಮ್ಮದ್ ಮುಸಾಬ್, ಕಾರವಾರ ಆಧಾರ್ ಸೇವಾ ಕೇಂದ್ರದ ವ್ಯವಸ್ಥಾಪಕ ರಾಘವೇಂದ್ರ ಕೆ., ಆಧಾರ್ ಜಿಲ್ಲಾ ಸಮಾಲೋಚಕ ಮಹಾಬಲೇಶ್ವರ್ ದೇಸಾಯಿ, ಬಿಎಲ್ಎಸ್ ಇಂಟರ್ನ್ಯಾಷನಲ್ ಪ್ರಾದೇಶಿಕ ಮುಖ್ಯಸ್ಥ ನರೇಶ್ ತುಮ್ಮಾ, ಕಾರ್ಯಾಚರಣೆ ವ್ಯವಸ್ಥಾಪಕ ಅನ್ವಯ್ ನಾಯ್ಕ್ ಹಾಗೂ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.