ಭಟ್ಕಳದಲ್ಲಿ ಜಾನುವಾರುಗಳಿಗೆ ಹಿಂಸೆ: ಆಹಾರ, ನೀರಿಲ್ಲದೆ ಕಟ್ಟಿಹಾಕಿದ್ದ 7 ಎತ್ತುಗಳ ರಕ್ಷಣೆ; ಒಂದು ಎತ್ತು ಸಾವು
ಭಟ್ಕಳ: ಜಾನುವಾರುಗಳಿಗೆ ಆಹಾರ ಮತ್ತು ನೀರು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಪ್ರಕರಣವನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿದ್ದಾರೆ.
ನವೆಂಬರ್ 14ರಂದು ಬೆಳಿಗ್ಗೆ 9.30ರ ಸುಮಾರಿಗೆ ಭಟ್ಕಳದ ಮೈನುದ್ದೀನ್ ಸ್ಟ್ರೀಟ್‌ನ 2ನೇ ಕ್ರಾಸ್, ಬ್ಲಾಕ್ ಬಿ ಪ್ರದೇಶದಲ್ಲಿರುವ ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಎಂಬುವವರ ಮನೆಯ ಸಮೀಪದ ತೆಂಗಿನ ಮರಗಳಿರುವ ಖುಲ್ಲಾ ಜಾಗದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಬಿಳಿ, ಕಪ್ಪು, ಕಂದು ಹಾಗೂ ಗಿರ್ ತಳಿಯ ಸೇರಿದಂತೆ ಒಟ್ಟು 8 ಎತ್ತುಗಳನ್ನು ಹಗ್ಗಗಳಿಂದ ತೆಂಗಿನ ಮರಗಳಿಗೆ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಜಾನುವಾರುಗಳಿಗೆ ಆಹಾರ ಮತ್ತು ನೀರು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು ಎನ್ನಲಾಗಿದೆ. ಈ ಪೈಕಿ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ಪೊಲೀಸರು ಸ್ಥಳದಿಂದ ಒಟ್ಟು 7 ಜೀವಂತ ಎತ್ತುಗಳು ಹಾಗೂ ಒಂದು ಮೃತಪಟ್ಟ ಎತ್ತನ್ನು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳ ಅಂದಾಜು ಮೌಲ್ಯ ಸುಮಾರು ₹89 ಸಾವಿರ ಆಗಿದ್ದು, 7 ಹಗ್ಗಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್ಐ ರವಿ ಗಾಂಜೇಕರ್ ಅವರು ಕೈಗೊಂಡಿದ್ದಾರೆ.
