ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಕಳೆದುಹೋದ ಬಂಗಾರದ ಓಲೆ, ₹5,500 ನಗದು ವಾರಸುದಾರರಿಗೆ ಹಸ್ತಾಂತರ

ಕುಮಟಾ: ರಸ್ತೆಯಲ್ಲಿ ಬಿದ್ದಿದ್ದ ಪರ್ಸ್‌ನಲ್ಲಿದ್ದ ಒಂದು ಜೊತೆ ಬಂಗಾರದ ಓಲೆ ಹಾಗೂ ₹5,500 ನಗದು ಹಣವನ್ನು ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ನವೆಂಬರ್ 14ರಂದು ಕುಮಟಾ ಹೊಸ ಬಸ್ ನಿಲ್ದಾಣದ ಆಟೋ ಚಾಲಕ ವೆಂಕಟೇಶ್ ರಾಮಕೃಷ್ಣ ನಾಯ್ಕ್ (ಬಸ್ತಿಪೇಟೆ, ಕುಮಟಾ) ಅವರು ಎಂದಿನಂತೆ ಆಟೋ ಬಾಡಿಗೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಪರ್ಸ್ ಬಿದ್ದಿರುವುದನ್ನು ಗಮನಿಸಿದ್ದಾರೆ. ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ಒಂದು ಜೊತೆ ಬಂಗಾರದ ಓಲೆ ಹಾಗೂ ₹5,500 ನಗದು ಹಣ ಇರುವುದು ಕಂಡುಬಂದಿದೆ.
ಬೆಲೆಬಾಳುವ ಒಡವೆ ಹಾಗೂ ಹಣವಿದ್ದರೂ ಯಾವುದೇ ಆಸೆಗೆ ಒಳಗಾಗದ ವೆಂಕಟೇಶ್ ನಾಯ್ಕ್ ಅವರು, ಅದರ ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಪರ್ಸ್ ಅನ್ನು ಕುಮಟಾ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
ಪರ್ಸ್‌ನಲ್ಲಿದ್ದ ಎಟಿಎಂ ಕಾರ್ಡ್‌ಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪೂಜಾ ಗಜಾನನ ನಾಯ್ಕ್ ಎಂಬ ಹೆಸರು ಪತ್ತೆಯಾಗಿದೆ. ಕಾರ್ಡ್‌ನಲ್ಲಿದ್ದ ವಿವರಗಳ ಆಧಾರದ ಮೇಲೆ ವಾರಸುದಾರರನ್ನು ಸಂಪರ್ಕಿಸಿದ ಪೊಲೀಸರು ಠಾಣೆಗೆ ಕರೆಸಿ, ಕಳೆದುಹೋಗಿದ್ದ ಒಂದು ಜೊತೆ ಬಂಗಾರದ ಓಲೆ ಹಾಗೂ ₹5,500 ನಗದು ಹಣವನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ರಸ್ತೆಯಲ್ಲಿ ಸಿಕ್ಕಿದ ಬೆಲೆಬಾಳುವ ವಸ್ತುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದೆ ಪ್ರಾಮಾಣಿಕತೆಯಿಂದ ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕ ವೆಂಕಟೇಶ್ ರಾಮಕೃಷ್ಣ ನಾಯ್ಕ್ ಅವರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದುಹೋದ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವಲ್ಲಿ ಸಮಯಪ್ರಜ್ಞೆ ಮೆರೆದ ಕುಮಟಾ ಪೊಲೀಸರ ಕರ್ತವ್ಯನಿಷ್ಠೆಗೂ ಪ್ರಶಂಸೆ ವ್ಯಕ್ತವಾಗಿದೆ.
