UK Express Logo

ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ 'ಆ ಚಾಕಲೇಟ್' ಫೋಟೋ ನಕಲಿ: ಸುಳ್ಳು ಸುದ್ದಿ ನಂಬಬೇಡಿ, ಫಾರ್ವರ್ಡ್ ಮಾಡಬೇಡಿ

By UKExpress on 2/8/2026
Featured Image

ಗೋಕರ್ಣ: ಗೋಕರ್ಣ ಭಾಗದ ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು 'ಅಮಲುಯುಕ್ತ ಚಾಕಲೇಟ್‌'ಗಳು (Drug-laced chocolates) ಮಾರುಕಟ್ಟೆಗೆ ಬಂದಿವೆ ಎಂಬ ಸುದ್ದಿ ಮತ್ತು ಫೋಟೋಗಳು ಕಳೆದ ಕೆಲ ದಿನಗಳಿಂದ ವಾಟ್ಸಾಪ್‌ಗಳಲ್ಲಿ (WhatsApp) ಕಾಡ್ಗಿಚ್ಚಿನಂತೆ ಹಬ್ಬುತ್ತಿವೆ. ಆದರೆ, ಇದು ಸತ್ಯಕ್ಕೆ ದೂರವಾದ ವಿಷಯವಾಗಿದ್ದು, ಪಾಲಕರು ಆತಂಕಕ್ಕೆ ಒಳಗಾಗಬಾರದು ಎಂದು ಶಿಕ್ಷಣ ಸಂಸ್ಥೆಯ ಪ್ರಮುಖರು , ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಇಂಟರ್ನೆಟ್ ಫೋಟೋ ವೈರಲ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಾಕಲೇಟ್ ಫೋಟೋ ಗೋಕರ್ಣದ್ದಲ್ಲ. ಅದು ಅಂತರ್ಜಾಲದಲ್ಲಿ (Internet) ಲಭ್ಯವಿರುವ ಯಾವುದೋ ಹಳೆಯ ಫೋಟೋವಾಗಿದ್ದು, ಅದನ್ನು ಇಲ್ಲಿನ ಘಟನೆ ಎಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಈ ವದಂತಿ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ನಾಗರಾಜ ಹಿತ್ತಲಮಕ್ಕಿ ಅವರು, "ಕಳೆದ ಹಲವು ದಿನಗಳಿಂದ ಜನರು ಮತ್ತು ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿ ಪಾಲಕರು ಆತಂಕಗೊಂಡಿದ್ದಾರೆ. ಇದರಿಂದ ಮಕ್ಕಳನ್ನು ಶಾಲೆಗೆ ಅಥವಾ ಹೊರಗಡೆ ಕಳುಹಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಆದರೆ ಗೋಕರ್ಣದ ಎಲ್ಲಿಯೂ ಇಂತಹ ಚಾಕಲೇಟ್‌ಗಳು ದೊರೆತಿಲ್ಲ. ಪಾಲಕರು ಭಯಪಡುವ ಬದಲು, ಮಕ್ಕಳ ದಿನನಿತ್ಯದ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸಿ, ಎಚ್ಚರಿಕೆಯಿಂದ ಇರುವಂತೆ ನೋಡಿಕೊಂಡರೆ ಸಾಕು," ಎಂದು ವಿನಂತಿಸಿದ್ದಾರೆ.

ಈ ವಿಷಯದ ಕುರಿತು ಗೋರ್ಕಣದ ಸಾರ್ವಜನಿಕರ ಬಳಿ ಹಾಗೂ ಗೋಕರ್ಣ ಪೊಲೀಸ್ ನಿರೀಕ್ಷಕರ ಬಳಿ ಮಾಹಿತಿ ಕೇಳಿದಾಗ "ಗೋಕರ್ಣ ವ್ಯಾಪ್ತಿಯಲ್ಲಿ ಇಂತಹ ಯಾವುದೇ ವಸ್ತುಗಳು ಅಥವಾ ಚಾಕಲೇಟ್‌ಗಳು ಕಂಡುಬಂದಿಲ್ಲ. ಇದು ಕೇವಲ ವದಂತಿಯಾಗಿದ್ದು, ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು," ಎಂದು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ಯಾವುದೇ ಖಚಿತ ಮಾಹಿತಿ ಇಲ್ಲದೆ ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡಿ ಗೊಂದಲ ಸೃಷ್ಟಿಸಬೇಡಿ. ವಾಟ್ಸಾಪ್‌ನಲ್ಲಿ ಬರುವ ಪ್ರತಿಯೊಂದು ಸಂದೇಶವನ್ನು ನಂಬಿ ಇತರರಿಗೆ ಹಂಚಬೇಡಿ ಎಂದು ಮನವಿ ಮಾಡಲಾಗಿದೆ.