UK Express Logo

ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಮಹಿಳೆಗೆ ಬ್ಲ್ಯಾಕ್‌ಮೇಲ್; ಬೆಂಗಳೂರಿನಲ್ಲಿ ಆರೋಪಿ ಬಂಧನ

By UKExpress on 2/9/2026
Featured Image ಭಟ್ಕಳ: ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರ ಪರಿಚಯ ಮಾಡಿಕೊಂಡು, ಸಲುಗೆ ಬೆಳೆಸಿ, ನಂತರ ಅವರ ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ .ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹೊನ್ನಾವರ ತಾಲೂಕಿನ ಮಂಕಿ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ಉಬರ್ ಪಾರ್ಸೆಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್ ಯುಶಾ (31) ಬಂಧಿತ ಆರೋಪಿ.

ಈತ ಸುಮಾರು ಒಂದು ವರ್ಷದ ಹಿಂದೆ ಭಟ್ಕಳದ ಮಹಿಳೆಯೊಬ್ಬರ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆದಿದ್ದನು. ನಂತರ ಅವರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ, "ನನ್ನೊಂದಿಗೆ ಮಾತನಾಡದಿದ್ದರೆ ಈ ಫೋಟೋಗಳನ್ನು ವೈರಲ್ ಮಾಡುತ್ತೇನೆ" ಎಂದು ಬೆದರಿಸಲಾರಂಭಿಸಿದ್ದನು. ಅಲ್ಲದೆ, ಸಂತ್ರಸ್ತೆಯ ಕುಟುಂಬದವರಿಗೂ ಫೋಟೋ ಕಳುಹಿಸಿ, ಮಾನಸಿಕ ಹಿಂಸೆ ನೀಡಿದ್ದನು.

ಈ ಕುರಿತು ನೊಂದ ಮಹಿಳೆ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಭಟ್ಕಳ ಪೊಲೀಸರು, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮೊಬೈಲ್ ಹಾಗೂ ಪೆನ್ ಡ್ರೈವ್ ಜಪ್ತಿ ಮಾಡಲಾಗಿದೆ. ವಿಚಾರಣೆ ವೇಳೆ ಈತ ಇನ್ನೂ ಹಲವು ಮಹಿಳೆಯರೊಂದಿಗೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿಗಳಾದ ಎಂ. ಕೃಷ್ಣಮೂರ್ತಿ, ಜಗದೀಶ್ ಎಂ ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ್ ಎಂ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ​ಭಟ್ಕಳ ಶಹರ ಸಿಪಿಐ ದಿವಾಕರ್ ಪಿ.ಎಂ ಅವರ ನೇತೃತ್ವದಲ್ಲಿ, ಪಿಎಸ್ಐ ನವೀನ್ ಎಸ್ ನಾಯ್ಕ ಹಾಗೂ ಸಿಬ್ಬಂದಿಗಳಾದ ರವಿ ಪಟಗಾರ, ಕಾಶಿನಾಥ್ ಕೊಟಗುಣಶಿ ಮತ್ತು ಕಾರವಾರ ಟೆಕ್ನಿಕಲ್ ಸೆಲ್ ವಿಭಾಗದ ಉದಯ್ ಗುಣಗಾ ಮತ್ತು ಬಬನ್ ಕದಂ ಅವರು ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಗೃತಿ: ಅಪರಿಚಿತರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ.