ಹಿಂದುತ್ವದಲ್ಲಿ ಜಾತಿಯಿಲ್ಲ, ತಾಕತ್ತಿದ್ದರೆ ಆರೆಸ್ಸೆಸ್ ನಿಲ್ಲಿಸಿ: ಭಟ್ಕಳದಲ್ಲಿ ಅನಂತಕುಮಾರ ಹೆಗಡೆ ಗುಡುಗು
ರಾಜಕೀಯದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ | ಭಟ್ಕಳ ಹಿಂದೂ ಸಂಗಮದಲ್ಲಿ ಹಿಂದುತ್ವದ ಮಂತ್ರ ಪಠಿಸಿದ ಅನಂತಕುಮಾರ
ಭಟ್ಕಳ: ನೂರು ವರ್ಷಗಳ ಹಿಂದೆ ನಾಗಪುರದಲ್ಲಿ ಬೆರಳೆಣಿಕೆಯಷ್ಟು ಜನರಿಂದ ಆರಂಭವಾದ ಆರೆಸ್ಸೆಸ್ ಇಂದು ಜಗತ್ತೇ ಒಪ್ಪಿಕೊಳ್ಳುವಂತಹ ಬೃಹತ್ ಶಕ್ತಿಯಾಗಿ ಬೆಳೆದಿದೆ. ಜಗತ್ತಿನ ಯಾರಿಗೂ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸುವ ತಾಕತ್ತಿಲ್ಲ, ತಾಕತ್ತಿದ್ದರೆ ಆರೆಸ್ಸೆಸ್ ಅನ್ನು ನಿಲ್ಲಿಸಿ ನೋಡೋಣ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು.
ಪಟ್ಟಣದ ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ 'ಹಿಂದೂ ಸಂಗಮ' ಕಾರ್ಯಕ್ರಮದಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು. ಹಿಂದುತ್ವದಲ್ಲಿ ಭಾಷೆ, ಜಾತಿ, ಗುಂಪು ಯಾವುದೂ ಮುಖ್ಯವಾಗುವುದಿಲ್ಲ. ನಾವೆಲ್ಲ ಹಿಂದೂಗಳು ಎನ್ನುವುದು ಮಾತ್ರ ಮುಖ್ಯವಾಗುತ್ತದೆ ಎಂದ ಅವರು, ಸಮಾಜದ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಭಾಗಿಗಳಾಗಬೇಕು ಎಂದು ಕರೆ ನೀಡಿದರು. ಬ್ರಾಹ್ಮಣ್ಯ ಮತ್ತು ಮನುಸ್ಮೃತಿಯ ಬಗ್ಗೆ ಇಂದು ಬಹು ಚರ್ಚೆ ನಡೆಯುತ್ತಿದೆ. ಆದರೆ ಮನುಸ್ಮೃತಿಯನ್ನು ಓದಿದವರು ಯಾರೂ ಚರ್ಚೆ ಮಾಡುತ್ತಿಲ್ಲ. ನಮ್ಮಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ನಮ್ಮ ಶೇ.೯೦ರಷ್ಟು ಋಷಿಮುನಿಗಳು ಬ್ರಾಹ್ಮಣರೇ ಅಲ್ಲ. ಹಿಂದೂ ಧರ್ಮದಲ್ಲಿ ಜಾತಿಯಿಂದ ಯಾರನ್ನೂ ಗುರುತಿಸಿಲ್ಲ, ಬದಲಾಗಿ ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಜಗತ್ತಿಗೆ ಆಯುರ್ವೇದ, ಗಣಿತ, ವಿಜ್ಞಾನ ಹಾಗೂ ಖಗೋಳ ಶಾಸ್ತ್ರವನ್ನು ನೀಡಿದ ಭಾರತ, ಇಂದು ವಿಶ್ವದೆಲ್ಲೆಡೆ ಯೋಗವನ್ನು ಪಸರಿಸಿದೆ. ಭಾರತದಲ್ಲಿ ಹಿಂದೂಗಳು ಇರುವುದರಿಂದಲೇ ಶಾಂತಿಯಿದೆ. ಆದರೆ ತಮ್ಮದು ಶಾಂತಿಯ ಧರ್ಮ ಎನ್ನುವ ಜಗತ್ತಿನ ಯಾವ ಇಸ್ಲಾಂ ದೇಶದಲ್ಲಿ ಇಂದು ಶಾಂತಿಯಿದೆ ಎಂದು ಅವರು ಪ್ರಶ್ನಿಸಿದರು.
ಸುಮಾರು ಎರಡು ವರ್ಷಗಳ ಬಳಿಕ ಭಟ್ಕಳದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಅನಂತಕುಮಾರ ಹೆಗಡೆಯವರು ತಮ್ಮ ರಾಜಕೀಯ ಮರುಪ್ರವೇಶದ ಬಗ್ಗೆ ಮಾತನಾಡಲಿದ್ದಾರೆ ಎಂಬ ಕಾತುರದಿಂದ ಸಾವಿರಾರು ಕಾರ್ಯಕರ್ತರು ಸೇರಿದ್ದರು. ಆದರೆ ತಮ್ಮ ಸುಮಾರು ೪೫ ನಿಮಿಷಗಳ ಭಾಷಣದಲ್ಲಿ ಕೇವಲ ಹಿಂದುತ್ವ, ಸಂಘಟನೆ ಹಾಗೂ ಹಿಂದೂ ಸಮಾಜದ ಒಗ್ಗಟ್ಟಿನ ಬಗ್ಗೆ ಮಾತ್ರ ಮಾತನಾಡಿದರು. ಭಾಷಣದ ಕೊನೆಯಲ್ಲಿ, ಬೇರೆ ಯಾವುದೋ ಕನಸನ್ನ, ಅರ್ಥವನ್ನು ಹುಡುಕಿಕೊಂಡು ಬಂದ ಜನರಿಗೆ ನಿರಾಸೆಯಾಗಿದ್ದರೆ ಕ್ಷಮೆ ಇರಲಿ, ಧರ್ಮದ ಕೆಲಸದಲ್ಲಿ ನಾನೆಂದಿಗೂ ಇರುತ್ತೇನೆ ಎಂದು ಹೇಳುವ ಮೂಲಕ ರಾಜಕೀಯದ ನಿರೀಕ್ಷೆಯಲ್ಲಿದ್ದವರಿಗೆ ಅಚ್ಚರಿ ಮೂಡಿಸಿದರು. ಅವರು ನಿರ್ಗಮಿಸುವ ವೇಳೆಯಲ್ಲಿ ಮುಂದಿನ ಮುಖ್ಯಮಂತ್ರಿ ಅನಂತಕುಮಾರ ಹೆಗಡೆ ಎನ್ನುವ ಘೋಷಣೆಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬಂಟ್ವಾಳದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂಗಳೆಲ್ಲರೂ ದ್ವೇಷ, ಅಸೂಯೆ ಬಿಟ್ಟು ಒಂದಾಗಬೇಕು. ಭಗವಂತ ಒಲಿಯುವುದು ಮುಗ್ಧ ಭಕ್ತರಿಗೆ ಹೊರತು ಜಾತಿ, ಮತಗಳಿಗಲ್ಲ. ತಾಯಂದಿರು ನಮ್ಮ ನಾಡಿನ ಮಹಾಪುರುಷರ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು. ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಪ್ರಭು, ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ, ಕೃಷ್ಣಾ ನಾಯ್ಕ ಆಸರಕೇರಿ, ಸುರೇಂದ್ರ ಪೂಜಾರಿ, ಗಣಪತಿ ಶಿರೂರು ಮುಂತಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆಕರ್ಷಕ ಬೃಹತ್ ಶೋಭಾ ಯಾತ್ರೆ ನಡೆಯಿತು.
