
ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ನಡೆಸಲಾದ 2026ನೇ ಸಾಲಿನ ಪರೀಕ್ಷೆ ಉತ್ತರ ಕನ್ನಡ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಯಿತು.
ಪರೀಕ್ಷೆಯು ಎರಡು ಅವಧಿಗಳಲ್ಲಿ ನಡೆಯಿತು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಮೊದಲ ಅವಧಿಯ ಪರೀಕ್ಷೆಗೆ ಒಟ್ಟು 8,222 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 5,847 ಅಭ್ಯರ್ಥಿಗಳು ಹಾಜರಾಗಿದ್ದರು. 2,375 ಅಭ್ಯರ್ಥಿಗಳು ಗೈರುಹಾಜರಾಗಿದ್ದರು.
ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ನಡೆದ ಎರಡನೇ ಅವಧಿಯ ಪರೀಕ್ಷೆಗೆ ಒಟ್ಟು 5,824 ಅಭ್ಯರ್ಥಿಗಳು ಹಾಜರಾಗಿದ್ದು, 2,399 ಅಭ್ಯರ್ಥಿಗಳು ಗೈರುಹಾಜರಾಗಿದ್ದರು.
ಪರೀಕ್ಷೆಯ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿದ್ದ ಎಲ್ಲಾ ಮಾರ್ಗಸೂಚಿಗಳು, ಗೌಪ್ಯತಾ ನಿಯಮಗಳು ಹಾಗೂ ಪರೀಕ್ಷಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್, ವೈದ್ಯಕೀಯ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿತ್ತು.
ಜಿಲ್ಲಾಡಳಿತದ ಸಮನ್ವಯದಲ್ಲಿ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹೆಸ್ಕಾಂ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆಯನ್ನು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಅವರು ಅಂಕೋಲಾ ಮತ್ತು ಕುಮಟಾದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಪರೀಕ್ಷೆಯ ಸುಗಮ ಹಾಗೂ ಯಶಸ್ವಿ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಉಪಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ವಿವಿಧ ಇಲಾಖೆಗಳ ಸಮನ್ವಯ ಮತ್ತು ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆ ಶಾಂತಿಯುತವಾಗಿ ಸಂಪನ್ನಗೊಂಡಿತು.
