
ಗೋಕರ್ಣ: ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿ ದಡ ಸೇರಲಾಗದೆ ಪರದಾಡುತ್ತಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಕುಡ್ಲೆ ಬೀಚ್‌ನ ಜೀವ ರಕ್ಷಕ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬೆಂಗಳೂರಿನ ಹರಿಬಾಬು (30) ಹಾಗೂ ಶರವಾನ್ (30) ರಕ್ಷಿಸಲ್ಪಟ್ಟ ಪ್ರವಾಸಿಗರು. ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಏಕಾಏಕಿ ಸುಳಿಗೆ ಸಿಲುಕಿದ್ದು, ಹರಿಬಾಬು ಹಾಗೂ ಶರವಾನ್ ಅವರು ಸುಳಿಯ ಸೆಳೆತಕ್ಕೆ ಸಿಲುಕಿ ದಡದತ್ತ ಈಜಲಾಗದೆ ಮುಳುಗುವ ಹಂತಕ್ಕೆ ತಲುಪಿದ್ದರು.
ಅಪಾಯವನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಮಂಜುನಾಥ ಹರಿಕಂತ್ರ ಹಾಗೂ ಜೆಸ್ಕಿ ಚಾಲಕ ಪ್ರಕಾಶ ಲಮಾಣಿ ತಕ್ಷಣ ಸಮುದ್ರಕ್ಕೆ ತೆರಳಿ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತಂದರು.
ರಕ್ಷಣಾ ಕಾರ್ಯಾಚರಣೆಗೆ ಜೀವ ರಕ್ಷಕ ನಾಗೇಂದ್ರ ಕೂರ್ಲೆ, ಪ್ರವಾಸಿ ಮಿತ್ರ ಸತೀಶ್ ನಾಯಕ್ ಹಾಗೂ ಕುಡ್ಲೆ ಬೀಚ್‌ನ ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಸಹಕರಿಸಿದರು.
ಸಿಬ್ಬಂದಿಯ ಸಮಯೋಚಿತ ಸ್ಪಂದನೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಇಬ್ಬರು ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ವೇಳೆ ಕೆಲಕಾಲ ಬೀಚ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
