UK Express Logo

ನದಿಜೋಡಣೆ ಯೋಜನೆ ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ

By UKExpress on 10/4/2026

ಶಿರಸಿ: ಬೇಡ್ತಿ (ಗಂಗಾವಳಿ), ವರದಾ, ಅಘನಾಶಿನಿ ಹಾಗೂ ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಆಯೋಜಿಸಲಾಗಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಧರಣಿಯಲ್ಲಿ ಸರ್ಕಾರಕ್ಕೆ 3 ಸಾವಿರಕ್ಕೂ ಅಧಿಕ ಮನವಿ ಪತ್ರಗಳನ್ನು ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.

ಶಿರಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರಣಿ ಯಶಸ್ವಿಗೊಳಿಸಲು ಸಂಚಾಲನಾ ಸಮಿತಿ ರಚಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಪರಿಸರ ಹೋರಾಟಗಾರರು, ತಜ್ಞರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಧರಣಿಯಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಜಸ್ಟಿಸ್ ಸಿ.ಎಂ. ಜೋಶಿ, ಪರಿಸರ ತಜ್ಞ ಪ್ರೊ. ಎ.ಎನ್. ಯಲ್ಲಪ್ಪ ರೆಡ್ಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪಶ್ಚಿಮಘಟ್ಟ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಬೃಹತ್ ಯೋಜನೆಗಳಿಂದ ನದಿಗಳ ಧಾರಣಾ ಸಾಮರ್ಥ್ಯ ಕುಸಿದಿದೆ ಎಂದು ಸಮಿತಿ ಆರೋಪಿಸಿದೆ. ನೀರಿನ ಲಭ್ಯತೆ ಕುರಿತ ಪ್ರಶ್ನೆಗಳಿರುವ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್‌ನ್ನು ತಡೆಹಿಡಿದು, ಸಮೀಕ್ಷಾ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದೆ.

ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಂಗಳೂರಿನ ಧರಣಿಯಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಅನಂತ ಹೆಗಡೆ ಅಶೀಸರ ಹೇಳಿದರು.

ಸ್ವರ್ಣವಲ್ಲಿ ಮಠದ ಶ್ರೀಗಳ ಚಾತುರ್ಮಾಸ ಸಂದರ್ಭದಲ್ಲಿ ಮುಖ್ಯಮಂತ್ರಿಗೆ 15 ಸಾವಿರಕ್ಕೂ ಅಧಿಕ ಪತ್ರಗಳನ್ನು ಕಳುಹಿಸಲಾಗಿದ್ದು, ಇದೀಗ ಅ.10ರಂದು ಮತ್ತಷ್ಟು ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ. ಬೇಡ್ತಿ ಚಳವಳಿಯ ಭಾಗವಾಗಿ ನಡೆದ ಪರಿಸರ ಗೀತೆ ರಚನಾ ಸ್ಪರ್ಧೆಯ ಗೀತೆಗಳ ಸಿಡಿಯನ್ನು ಧರಣಿಯಲ್ಲಿ ಅನಾವರಣಗೊಳಿಸಲಾಗುವುದು ಎಂದರು.

ನವೆಂಬರ್‌ನಲ್ಲಿ ಯಲ್ಲಾಪುರದಲ್ಲಿ ರಸ್ತೆ ತಡೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಬೇಡ್ತಿ–ಅಘನಾಶಿನಿ ಯೋಜನೆ ಕೈಬಿಡುವ ಕುರಿತು ಚರ್ಚಿಸಲು ಶೀಘ್ರ ದಿನಾಂಕ ನಿಗದಿಪಡಿಸುವಂತೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಗೋಪಾಲಕೃಷ್ಣ ವೈದ್ಯ, ವಿಶ್ವನಾಥ ಶಿಗೇಹಳ್ಳಿ ಹಾಗೂ ರಮೇಶ ದುಬಾಶಿ ಉಪಸ್ಥಿತರಿದ್ದರು.