
ಶಿರಸಿ: ಶಿರಸಿ–ಬನವಾಸಿ ರಸ್ತೆಯ ಅರೆಕೊಪ್ಪದ ತೋಟಗಾರಿಕಾ ನರ್ಸರಿ ಕ್ರಾಸ್ ಬಳಿ ನಡೆದ ಬೊಲೆರೋ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಿರಸಿ ತಾಲೂಕಿನ ಕಬ್ಬೆ ಗ್ರಾಮದ ವಿಶ್ವೇಶ್ವರ ಮೋಹನ ಹೆಗಡೆ ಕಬ್ಬೆ (63) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅ.3ರಂದು ಮಧ್ಯಾಹ್ನದ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವಿಶ್ವೇಶ್ವರ ಮೋಹನ ಹೆಗಡೆಯವರು ತಮ್ಮ ಮಗಳು ಕು. ಸ್ನೇಹಾ ವಿಶ್ವೇಶ್ವರ ಹೆಗಡೆ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬನವಾಸಿ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ, ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಲಾಗಿದ್ದ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ವಿಶ್ವೇಶ್ವರ ಹೆಗಡೆಯವರಿಗೆ ತಲೆ, ಎದೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ನೇಹಾ ಅವರಿಗೂ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ವಿಶ್ವೇಶ್ವರ ಹೆಗಡೆಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತ ವಿಶ್ವೇಶ್ವರ ಮೋಹನ ಹೆಗಡೆಯವರು ಉಂಚಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದು, ವಿಘ್ನೇಶ್ವರ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ ಎಂ. ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೊಲೆರೋ ವಾಹನವನ್ನು ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲ್ಲಿಸಿದ್ದ ಆರೋಪದಡಿ ಫೈಜಾನ್ ಅಬ್ದುಲ್ ರಜಾಕ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
