ಸೀ ವಿಜಿಲ್-2026 ಸಮರಾಭ್ಯಾಸ ಯಶಸ್ವಿ: ಕರಾವಳಿ ಭದ್ರತೆಗೆ ನೌಕಾಪಡೆಯಿಂದ ವಿಶೇಷ ಕಾರ್ಯಾಚರಣೆ

ಕಾರವಾರ: ದೇಶದ ಕರಾವಳಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯ ನೇತೃತ್ವದಲ್ಲಿ ನಡೆದ ‘ಸೀ ವಿಜಿಲ್-2026’ ರಾಷ್ಟ್ರೀಯ ಕರಾವಳಿ ರಕ್ಷಣಾ ಸಮರಾಭ್ಯಾಸ ನವೆಂಬರ್ 9ರಿಂದ 12ರವರೆಗೆ ಯಶಸ್ವಿಯಾಗಿ ಜರುಗಿತು.
ಭಾರತೀಯ ಕರಾವಳಿ ಕಾವಲು ಪಡೆ, ಕಸ್ಟಮ್ಸ್ ಇಲಾಖೆ, ಕರಾವಳಿ ಪೊಲೀಸ್, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಬಂದರು ಪ್ರಾಧಿಕಾರಗಳು ಸೇರಿದಂತೆ ಹಲವು ಕಡಲ ಭದ್ರತಾ ಸಂಸ್ಥೆಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು.
2018ರಲ್ಲಿ ಆರಂಭಗೊಂಡಿರುವ ‘ಸೀ ವಿಜಿಲ್’ ಸಮರಾಭ್ಯಾಸದ ಐದನೇ ಆವೃತ್ತಿ ಇದಾಗಿದ್ದು, ದೇಶದ ಸಮುದ್ರ ಗಡಿ ಹಾಗೂ ಕರಾವಳಿ ಪ್ರದೇಶಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಇಲಾಖೆಗಳ ಕಾರ್ಯಾಚರಣಾ ಸಿದ್ಧತೆ ಮತ್ತು ಪರಸ್ಪರ ಸಮನ್ವಯವನ್ನು ಪರಿಶೀಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸಮುದ್ರ ಮಾರ್ಗದಿಂದ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಇಲಾಖೆಗಳ ನಡುವಿನ ಸಂವಹನ, ತುರ್ತು ಪ್ರತಿಕ್ರಿಯೆ ಹಾಗೂ ಕಾರ್ಯಾಚರಣೆಯ ಸಂದರ್ಭದಲ್ಲಿ ಪರಸ್ಪರ ಸಹಕಾರದ ಪರಿಣಾಮಕಾರಿತ್ವವನ್ನು ಈ ಅಭ್ಯಾಸದ ಮೂಲಕ ಪರೀಕ್ಷಿಸಲಾಯಿತು.
ಈ ಬಾರಿಯ ಸಮರಾಭ್ಯಾಸದಲ್ಲಿ ಸ್ಥಳೀಯ ಮೀನುಗಾರ ಸಮುದಾಯದ ಪಾಲ್ಗೊಳ್ಳುವಿಕೆಗೂ ವಿಶೇಷ ಆದ್ಯತೆ ನೀಡಲಾಗಿತ್ತು. ಕರಾವಳಿ ಭದ್ರತೆಯಲ್ಲಿ ಮೀನುಗಾರರು ಪ್ರಮುಖ ಪಾಲುದಾರರಾಗಿರುವುದರಿಂದ, ಸಮುದ್ರದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಯಿತು.
ಮೀನುಗಾರರು ಮತ್ತು ಭದ್ರತಾ ಸಂಸ್ಥೆಗಳ ನಡುವಿನ ಸಂವಹನ ಹಾಗೂ ಸಹಕಾರವನ್ನು ಹೆಚ್ಚಿಸುವ ಮೂಲಕ ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರದ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಕರ್ನಾಟಕ ನೌಕಾ ವಲಯವು ರಾಜ್ಯದ ಎಲ್ಲ ಕಡಲ ಮತ್ತು ಕರಾವಳಿ ಭದ್ರತಾ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯ ಸಾಧಿಸಿ ಈ ಸಮರಾಭ್ಯಾಸದಲ್ಲಿ ಕಾರ್ಯನಿರ್ವಹಿಸಿತು.
ದೇಶದ ಕರಾವಳಿ ಪ್ರದೇಶಗಳು, ಸಮುದ್ರದಲ್ಲಿನ ಪ್ರಮುಖ ಆಸ್ತಿಗಳು ಹಾಗೂ ಕರಾವಳಿ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ‘ಸೀ ವಿಜಿಲ್-2026’ ಮಹತ್ವದ ಪಾತ್ರ ವಹಿಸಿದೆ. ನಿರಂತರ ನಿಗಾ, ಪರಸ್ಪರ ಸಹಕಾರ ಮತ್ತು ಕಾರ್ಯಾಚರಣಾ ಸಿದ್ಧತೆಯ ಮೂಲಕ ದೇಶದ ಕಡಲ ಗಡಿಯನ್ನು ಸುರಕ್ಷಿತವಾಗಿಡುವ ಸಂಕಲ್ಪವನ್ನು ಈ ಅಭ್ಯಾಸ ಮತ್ತಷ್ಟು ಬಲಪಡಿಸಿದೆ ಎಂದು ಭಾರತೀಯ ನೌಕಾಪಡೆಯ ಪ್ರಕಟಣೆ ತಿಳಿಸಿದೆ.
