
ಉತ್ತರ ಕನ್ನಡ: ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿತರಿಸಲಾಗುವ ಬಿಸಿಯೂಟ ಹಾಗೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಸೂಚನೆ ನೀಡಿದರು.
ಗುರುವಾರ ಜಿಲ್ಲಾ ಪಂಚಾಯತ್ನ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಆಹಾರ ವಿತರಿಸುವ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಆಹಾರ ತಯಾರಿಸುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಕೊಠಡಿಗಳನ್ನು ನಿರ್ಮಿಸುವಾಗ ಆಹಾರ ಸಾಮಗ್ರಿಗಳ ಸಂಗ್ರಹಣೆಗೆ ಪ್ರತ್ಯೇಕ ಸ್ಟೋರ್ ರೂಂ, ಅಗತ್ಯ ಸೌಲಭ್ಯಗಳು ಹಾಗೂ ಸೂಕ್ತ ಭದ್ರತೆ ಒದಗಿಸಬೇಕು. ಆಹಾರ ತಯಾರಕರು ಮತ್ತು ಸಹಾಯಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಶಿರಸಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಎಸ್ಆರ್ ಅನುದಾನದಡಿ ಮಕ್ಕಳಿಗಾಗಿ ಆರಂಭಿಕ ಹಸ್ತಕ್ಷೇಪ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಹಣ ಪಾವತಿಗೆ ಬಿಲ್ ಸಿದ್ಧಪಡಿಸಲಾಗಿದ್ದು, ಎರಡು ವಾರದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಶಾಲೆಗೆ ಗೈರಾಗುವ ಮಕ್ಕಳ ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆತರಬೇಕು. ಪಿಎಂ ಪೋಷಣ್ ಯೋಜನೆಯಡಿ ಶಾಲೆಗಳಲ್ಲಿ ನ್ಯೂಟ್ರಿ ಗಾರ್ಡನ್ ನಿರ್ಮಿಸುವುದರ ಜೊತೆಗೆ ಬಯೋಗ್ಯಾಸ್ ಘಟಕಗಳ ಅಳವಡಿಕೆ ಸಾಧ್ಯತೆಗಳನ್ನೂ ಪರಿಶೀಲಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಯೋಜನೆಗಳ ಕುರಿತು ರೈತರಿಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ರೈತರನ್ನು ಒಳಗೊಂಡ ವಾಟ್ಸಾಪ್ ಗುಂಪುಗಳನ್ನು ರಚಿಸಿ ಯೋಜನೆಗಳ ಮಾಹಿತಿ ಹಾಗೂ ತರಬೇತಿ ನೀಡಬೇಕು. ಮಳೆ ಮಾಪನ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಶೀಲಿಸಬೇಕು ಎಂದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಶಿರಸಿಯಲ್ಲಿ ಬಾವಿಗಳ ನೀರಿನಲ್ಲಿ ತೈಲ ಮಿಶ್ರಣ ಕಂಡುಬಂದಿರುವ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕಾರಣ ಪತ್ತೆಹಚ್ಚಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ, ಉಪ ಕಾರ್ಯದರ್ಶಿಗಳಾದ ಅಲ್ಲಾಬಕಷ್, ಪ್ರಕಾಶ್ ಹಾಲಮ್ಮನವರ್, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
