
ಕಾರವಾರ: ಭಾರತೀಯ ಅಂಚೆ ಇಲಾಖೆಯ ಡಿಜಿಟಲ್ ಪಾವತಿ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕಾರವಾರ ಅಂಚೆ ವಿಭಾಗದ ವತಿಯಿಂದ ಮೊದಲ ಮರ್ಚೆಂಟ್ ಸೌಂಡ್ ಬಾಕ್ಸ್ ಅನ್ನು ಗುರುವಾರ ಹಸ್ತಾಂತರಿಸಲಾಯಿತು.
ನಗರದ ಮಾರುತಿ ಟೆಂಪಲ್ ರಸ್ತೆಯಲ್ಲಿರುವ ಮಹಾಲಸಾ ಕ್ಯಾಂಟೀನ್ ಮಾಲೀಕರಿಗೆ ಕಾರವಾರ ಅಂಚೆ ವಿಭಾಗದ ಎಸ್ಪಿಒಎಸ್ ಮತ್ತು ಡಿಎಚ್ ಹೂವಪ್ಪ ಜಿ. ಅವರು ಮರ್ಚೆಂಟ್ ಸೌಂಡ್ ಬಾಕ್ಸ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮರ್ಚೆಂಟ್ ಡಾಕ್ ಪೇ ಸೌಂಡ್ ಬಾಕ್ಸ್ ಸೇವೆಯು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಈ ಸೌಲಭ್ಯದ ಮೂಲಕ ಭಾರತೀಯ ಅಂಚೆ ಇಲಾಖೆಯು ಫೋನ್ಪೇ, ಗೂಗಲ್ಪೇ ಮುಂತಾದ ಡಿಜಿಟಲ್ ಪಾವತಿ ಸೇವೆಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುಲಭವಾಗಿ ತಲುಪಿಸುವುದು ಅಂಚೆ ಇಲಾಖೆಯ ಉದ್ದೇಶವಾಗಿದೆ. ಸಾರ್ವಜನಿಕರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆಯನ್ನು ತೆರೆದು, ಅದನ್ನು ಅಂಚೆ ಉಳಿತಾಯ ಬ್ಯಾಂಕ್ ಖಾತೆಯೊಂದಿಗೆ ಜೋಡಿಸುವ ಮೂಲಕ ಈ ಸೇವೆಯ ಪ್ರಯೋಜನ ಪಡೆಯಬಹುದು ಎಂದರು.
ಮರ್ಚೆಂಟ್ ಸೌಂಡ್ ಬಾಕ್ಸ್ ಪಡೆಯಲು ಒಮ್ಮೆ ಮಾತ್ರ ₹299 ಹಾಗೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ನಂತರ ಪ್ರತಿ ತಿಂಗಳು ₹99 ಹಾಗೂ ಜಿಎಸ್ಟಿ ಬಾಡಿಗೆ ವಿಧಿಸಲಾಗುತ್ತದೆ.
ತಿಂಗಳಿಗೆ ಕನಿಷ್ಠ 500 ಡಿಜಿಟಲ್ ವಹಿವಾಟುಗಳನ್ನು ನಡೆಸುವ ವ್ಯಾಪಾರಿಗಳಿಗೆ ಮಾಸಿಕ ಬಾಡಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯಲಿದ್ದು, ₹49 ಹಾಗೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ತಿಂಗಳಿಗೆ 1,000 ಅಥವಾ ಅದಕ್ಕಿಂತ ಹೆಚ್ಚು ವಹಿವಾಟುಗಳನ್ನು ನಡೆಸುವ ವ್ಯಾಪಾರಿಗಳಿಗೆ ಮಾಸಿಕ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ.
ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಆಸಕ್ತರು ತಮ್ಮ ವ್ಯಾಪ್ತಿಯ ಅಂಚೆದಾರರನ್ನು ಸಂಪರ್ಕಿಸಿ ಮರ್ಚೆಂಟ್ ಸೌಂಡ್ ಬಾಕ್ಸ್ಗಾಗಿ ಬೇಡಿಕೆ ಸಲ್ಲಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಪಿಪಿಬಿ ಹಿರಿಯ ವ್ಯವಸ್ಥಾಪಕ ಜೋಸ್ ಕುಮಾರ್ ಪಿ.ಎಸ್., ಎಂ.ಓ. ಗಿರೀಶ್, ಕಾರವಾರ ಮುಖ್ಯ ಅಂಚೆ ಕಚೇರಿಯ ಅಂಚೆದಾರ ಆರ್.ಆರ್. ಗೌಂಡರ್, ಚರಣ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
