
ಹೊನ್ನಾವರ: ಆಂಧ್ರಪ್ರದೇಶದಲ್ಲಿ ಅರ್ನಾಬ್ ಮತ್ತು ಮುರಸು ಚಂಡಮಾರುತಗಳಿಂದ ಉಂಟಾದ ಭಾರೀ ಮಳೆ ಹಾಗೂ ಪ್ರವಾಹದಿಂದ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದ ಸಂದರ್ಭದಲ್ಲಿ, ವಿದ್ಯುತ್ ಸಂಪರ್ಕ ಮರುಸ್ಥಾಪಿಸುವಲ್ಲಿ ಮಹತ್ವದ ಸೇವೆ ಸಲ್ಲಿಸಿದ ಹೊನ್ನಾವರ ತಾಲೂಕಿನ ಹೆಸ್ಕಾಂ ಪವರ್‌ಮ್ಯಾನ್ ಶ್ರೀಪಾದ ಎನ್. ನಾಯ್ಕ ಅವರನ್ನು ಹೆಸ್ಕಾಂ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಚಂಡಮಾರುತದಿಂದ ಹಾನಿಗೊಳಗಾದ ವಿದ್ಯುತ್ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದ ಶ್ರೀಪಾದ ನಾಯ್ಕ ಅವರು ಸುಮಾರು 400 ವಿದ್ಯುತ್ ಕಂಬಗಳನ್ನು ಬದಲಾಯಿಸಿ, 1,000ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಮರುಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾವಳಿ ಹಬ್ಬವನ್ನೂ ಲೆಕ್ಕಿಸದೆ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿ ಜನರ ಮನೆಗಳಿಗೆ ಬೆಳಕು ಮರಳಿಸುವಲ್ಲಿ ಶ್ರಮಿಸಿದ ಅವರು, ಸುರಕ್ಷಿತವಾಗಿ ಸೇವೆ ಪೂರ್ಣಗೊಳಿಸಿ ಹೊನ್ನಾವರ ಕಚೇರಿಗೆ ಮರಳಿದ್ದಾರೆ.
ಈ ಸಂದರ್ಭದಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಎನ್. ಭಟ್, ಪಟ್ಟಣ ಶಾಖೆಯ ಸಹಾಯಕ ಇಂಜಿನಿಯರ್ ಶಂಕರ ಜಿ. ಗೌಡ, ಗುತ್ತಿಗೆದಾರ ಎಸ್.ಕೆ. ಶೆಟ್ಟಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
